ಮೈಸೂರು, ಫೆ. 22: ನಮ್ಮೂರಲ್ಲಿ ರಾಮಮಂದಿರ ಕಟ್ಟುತ್ತೇನೆ ಎಂಬ ಮಾತು ಧರ್ಮ ವಿರೋಧಿ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ ಸಂಗತಿ ಎಂದು ಬಿಜೆಪಿ ವಿರುದ್ಧ ಮಾಜಿ ಸಚಿವ ಎಚ್.ಸಿ. ಮಹದೇವಪ್ಪ ಹರಿಹಾಯ್ದಿದ್ದಾರೆ.
ನಮ್ಮೂರಲ್ಲಿ ರಾಮಮಂದಿರ ಕಟ್ಟಿಸುತ್ತಿದ್ದೇನೆ ಎಂಬ ಸಿದ್ದರಾಮಯ್ಯ ಹೇಳಿಕೆ ವ್ಯಕ್ತವಾಗಿರುವ ಟೀಕೆಗಳಿಗೆ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿರುವ ಮಹದೇವಪ್ಪ, ರಾಮಮಂದಿರವು ಊರಲ್ಲಿ ಕಟ್ಟಿದಾಗಲೂ ಸಹ ಅವನಿಗೆ ಮನ್ನಣೆ ಸಿಗುತ್ತಿದೆ ಎಂದರೆ ಅವನು ನಿಜವಾದ ರಾಮಭಕ್ತನಾಗಿರುತ್ತಾನೆ. ಇಲ್ಲ ಅಯೋಧ್ಯೆಯಲ್ಲೇ ಕಟ್ಟಬೇಕು, ಬೇರೆಲ್ಲಿ ಕಟ್ಟಿದರೂ ಅವನು ರಾಮ ವಿರೋಧಿ ಎಂದರೆ ಅವನು ಸಂವಿಧಾನ ವಿರೋಧಿ ಬಿಜೆಪಿ ಭಕ್ತನಾಗಿರುತ್ತಾನೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇಂತಹ ಮೂರ್ಖರಿಗೆ ಧರ್ಮ ಗೊತ್ತಿಲ್ಲ, ದೇವರು ಗೊತ್ತಿಲ್ಲ, ಇವರಿಗೆ ಸಮಾಜದ ಬಗ್ಗೆ ಕಿಂಚಿತ್ತೂ ಕಾಳಜಿ ಇರುವುದಿಲ್ಲ. ಇವರಿಗೆ ಕೇವಲ ಕೋಮುವಾದಿ ರಾಜಕೀಯ ಪಕ್ಷವೊಂದರ ಹಿತ ಮುಖ್ಯವಾಗಿದೆಯೇ ಹೊರತು ಎಂದಿಗೂ ಸಹ ಧಾರ್ಮಿಕ ಸಾಮರಸ್ಯ, ಸಂವಿಧಾನದಾತ್ಮಕ, ಪ್ರಜಾಸತ್ತಾತ್ಮಕ ವಾತಾವರಣ ಎಂದಿಗೂ ಮುಖ್ಯವಾಗಿಲ್ಲ. ಆದರೆ, ಬಾಬಾ ಸಾಹೇಬರ ನೆಲದಲ್ಲಿ ಹುಟ್ಟಿ ಬಾಬಾ ಸಾಹೇಬರ ಆಲೋಚನೆಯಿಂದಲೇ ಪ್ರಭಾವಿತರಾದ ನಾವು ಎಂದಿಗೂ ಈ ಮನುವಾದಿ ಧಾರ್ಮಿಕ ಮತ್ತು ರಾಜಕೀಯ ಹುಚ್ಚರ ಕುತಂತ್ರಗಳಿಗೆ ಮನ್ನಣೆ ಕೊಡುವುದಿಲ್ಲ ಎಂದು ಈ ಮೂಲಕ ಸ್ಪಷ್ಟ ಪಡಿಸುತ್ತೇನೆ ಎಂದಿದ್ದಾರೆ.