Bengaluru: ಕಳೆದ ವರ್ಷದ ಮುಂಗಾರು ಕೈಕೊಟ್ಟಿದ್ದರಿಂದ ಅಪಾರ ಪ್ರಮಾಣದಲ್ಲಿ ಬೆಳೆ ನಾಶವಾಗಿದ್ದು, ರೈತರಿಗೆ ರಾಜ್ಯ ಸರ್ಕಾರ ಬೆಳೆ ಪರಿಹಾರ ನೀಡುವುದಾಗಿ ಘೋಷಣೆ ಮಾಡಿತ್ತು. ಆದರೆ ಇಂದಿಗೂ ಕೂಡಾ ಪರಿಹಾರ ಪಡೆದವರಿಗಿಂತ, ವಂಚಿತರ ಸಂಖ್ಯೆಯೇ ಹೆಚ್ಚಾಗಿದೆ.

ಈ ವರ್ಷದ ಮುಂಗಾರು ಬಿತ್ತನೆ ಆರಂಭವಾಗಿದ್ದರೂ, ಕಳೆದ ವರ್ಷ ಘೋಷಣೆಯಾಗಿರುವ ಬೆಳೆ ಪರಿಹಾರ ಇಂದಿಗೂ ರೈತರ ಕೈಸೇರಿಲ್ಲ. ರಾಜ್ಯದ 34.50 ಲಕ್ಷ ರೈತರಿಗೆ ಮಾತ್ರ ಬೆಳೆ ಪರಿಹಾರ ನೀಡಲಾಗಿದೆ. ಆದರೆ ಇನ್ನೂ ಶೇಕಡಾ 60 ರಿಂದ 70ರಷ್ಟು ರೈತರಿಗೆ ಪರಿಹಾರ ದೊರಕಿಲ್ಲ ಎಂದು ರೈತ ಸಂಘಟನೆಗಳು ತೀವ್ರ ಆಕ್ರೋಶ ಹೊರಹಾಕಿವೆ. ಇನ್ನು ಈ ಹಿಂದೆ ರಾಜ್ಯ ಸರ್ಕಾರ ನೀಡುತ್ತಿದ್ದ 4000 ಕಿಸಾನ್ ಸಮ್ಮಾನ್ ನಿಧಿ (Kisan Samman Nidhi) ಯನ್ನು ನಿಲ್ಲಿಸಿರುವುದರಿಂದ ರೈತರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದಿದ್ದಾರೆ.
ಈ ಕುರಿತು ಟ್ವೀಟ್ ಮಾಡಿ ಆಕ್ರೋಶ ಹೊರ ಹಾಕಿರುವ ವಿಪಕ್ಷ ಬಿಜೆಪಿ (BJP), ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಂಕಷ್ಟಿತ ರೈತರ ಗೋಳನ್ನು ಹೇಳುವವರು, ಕೇಳುವವರು ಯಾರೂ ಇಲ್ಲದ ಪರಿಸ್ಥಿತಿ ಉಂಟಾಗಿದೆ. ಕಳೆದ ಬಾರಿಯ ಮುಂಗಾರು ಹಾಗೂ ಹಿಂಗಾರು ವಿಫಲತೆಯಿಂದ ನೊಂದಿರುವ ರೈತರು ಬಿಡಿಗಾಸು ಬರ ಪರಿಹಾರ ನೀಡಿ ಕೈತೊಳೆದುಕೊಂಡು ರೈತದ್ವೇಷಿ ಸರ್ಕಾರವೆಂಬ ಅಪಕೀರ್ತಿ ಅಂಟಿಸಿ ಕೊಂಡಿದೆ.ಇಂತಹ ಕಷ್ಟದ ಸಮಯದಲ್ಲಾದರೂ ಸರ್ಕಾರದ ಬೆಳೆ ಪರಿಹಾರವೂ ರೈತನ ಖಾತೆಗೆ ಜಮೆಯಾಗಿಲ್ಲ.

ಬಿಜೆಪಿ ಸರ್ಕಾರ ನೀಡುತ್ತಿದ್ದ ಕಿಸಾನ್ ಸಮ್ಮಾನ್ ಯೋಜನೆಯ ರಾಜ್ಯದ ಪಾಲಿನ 4000 ರೂ ಗಳನ್ನೂ ನಿಲ್ಲಿಸಿ ಅನ್ನದಾತರಿಗೆ ದ್ರೋಹ ಬಗೆಯಲಾಯಿತು. ಕಾಂಗ್ರೆಸ್ ಸರ್ಕಾರ ಬಂದು 1 ವರ್ಷದ ಅವಧಿಯಿಂದಲೂ ರೈತರು ಒಂದಲ್ಲ ಒಂದು ಸಂಕಷ್ಟಕ್ಕೆ ಸಿಲುಕುತ್ತಿದ್ದರೂ, ಕೇವಲ ಮತ ಬ್ಯಾಂಕ್ (Bank) ರಾಜಕಾರಣವನ್ನು ಹೊರತುಪಡಿಸಿ ಈ ಸರ್ಕಾರ ಯಾವುದೇ ಜನಪರ ಕಾರ್ಯಗಳಿಗೂ ಕಿಂಚಿತ್ತು ಗಮನ ಹರಿಸಲಿಲ್ಲ. ಬೆಳೆ ಪರಿಹಾರದಿಂದ ವಂಚಿತರಾಗಿರುವ ಅನ್ನದಾತ ರೈತನ ನೆರವಿಗೆ ಈಗಲಾದರೂ ಧಾವಿಸಿ ಬೆಳೆ ಪರಿಹಾರ ನೀಡಲಿ.
ಸ್ವಾಭಿಮಾನಕ್ಕೆ ಹೆಸರಾಗಿದ್ದ ನಾಡಿಗೇ ಅನ್ನ ನೀಡುವ ರೈತ ಸಮುದಾಯ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿಯಿಂದ ನೊಂದು, ಬೆಂದು, ಬಸವಳಿದು ಆತ್ಮಹತ್ಯೆಯ ಹಾದಿ ಹಿಡಿದಿದೆ. ರಾಜ್ಯದ ಪಾಲಿನ ಕಿಸಾನ್ ಸಮ್ಮಾನ್ ಸಹಾಯಧನ ರದ್ದು, 1087 ಕೋಟಿ ಪ್ರೋತ್ಸಾಹಧನ ಬಾಕಿ, ಹನಿ ನೀರಾವರಿ ಯೋಜನೆಯ ಸಹಾಯಧನ ಕಡಿತ, ಬೆಲೆ ಏರಿಕೆ ಮತ್ತು ಸಮರ್ಪಕವಾಗಿ ಬರ ಪರಿಹಾರ ನೀಡದ ಕಾಂಗ್ರೆಸ್ ಸರ್ಕಾರ, ರೈತರಿಗೆ ‘ಆತ್ಮಹತ್ಯೆಯ ದೌರ್ಭಾಗ್ಯ’ ನೀಡಿದೆ.
ಸಿಎಂ ಸಿದ್ದರಾಮಯ್ಯ (CM Siddaramaiah)ನವರ ರೈತ ವಿರೋಧಿ ನಡೆಯಿಂದ ಕೇವಲ ಹದಿನೈದು ತಿಂಗಳಲ್ಲೇ ರಾಜ್ಯದ ಸರಿ ಸುಮಾರು 1,182 ಅನ್ನದಾತರು ಉಸಿರು ಚೆಲ್ಲಿದ್ದಾರೆ. ನೊಂದ ರೈತ ಕುಟುಂಬದ ಶಾಪ ಕಾಂಗ್ರೆಸ್ ಸರ್ಕಾರಕ್ಕೆ ತಟ್ಟದೇ ಇರಲಾರದು ಎಂದು ಟೀಕಿಸಿದೆ.