ಹೊಸದಿಲ್ಲಿ, ಜ. 29: ದಿಲ್ಲಿ ಹರಿಯಾಣಾ ಗಡಿಯಲ್ಲಿ ರೈತರು ನಿರ್ಮಿಸಿರುವ ಟೆಂಟ್‌ಗಳನ್ನು ನಾಶ ಮಾಡಿರುವ ಗುಂಪೊಂದು, ಕಲ್ಲು ತೂರಾಟ ನಡೆಸಿರುವ ಘಟನೆ ಇಂದು ಜರುಗಿದೆ.
ಸ್ಥಳೀಯರು ಎಂದು ಹೇಳಿಕೊಂಡಿರುವ ಗುಂಪೊಂದು ಈ ಕೃತ್ಯ ಎಸಗಿದ್ದು, ಪ್ರತಿಭಟನಾನಿರತ ರೈತರು ಹಾಗೂ ಈ ಗುಂಪಿನ ನಡುವೆ ತೀವ್ರ ವಾಗ್ವಾದ ನಡೆದಿದೆ ಎಂದು ತಿಳಿದುಬಂದಿದೆ.
ಗುಂಪುಗಳನ್ನು ಚದುರಿಸುವ ಸಲುವಾಗಿ ಪೊಲೀಶರು ಅಶ್ರುವಾಯು ಪ್ರಯೋಗಿಸಿದ್ದಾರೆ. 200ಕ್ಕಿಂತ ಹೆಚ್ಚು ಜನರಿದ್ದ ಗುಂಪೊಂದು ಹರಿಯಾಣ – ದಿಲ್ಲಿ ಗಡಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿರುವ ಜಾಗಕ್ಕೆ ಬಂದು ಕಲ್ಲು ತೂರಾಟ ನಡೆಸಿದ್ದು, ಗಣರಾಜ್ಯೋತ್ಸವ ಟ್ರ್ಯಾಕ್ಟರ್ ಪರೇಡ್ ನಂತರ ಶಾಂತಿಯುತವಾಗಿದ್ದ ಪ್ರತಿಭಟನೆ ಮತ್ತೆ ಹಿಂಸಾ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಗಳು ದಟ್ಟೈಸಿವೆ.
ಘಟನೆಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಗಾಯಗೊಂಡಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಆಗಿಮಿಸಿದ ಗುಂಪು ಹೋರಾಟ ನಿರತ ರೈತರು ಬಳಸುತ್ತಿದ್ದ ವಾಷಿಂಗ್ ಮಷೀನ್‌ಗಳು ಹಾಗೂ ಮೂಲ ಸೌಕರ್ಯಗಳನ್ನು ನಾಶ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಘಟನೆಯ ಹಿನ್ನೆಲೆಯಲ್ಲಿ ಘಾಜಿಪುರದಲ್ಲಿರುವ ದಿಲ್ಲಿ-ಉತ್ತರಪ್ರದೇಶ ಗಡಿಯಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.
ವಿದ್ಯುತ್, ನೀರು, ಶೌಚಾಲಯ ಕಟ್: ಹೋರಾಟ ನಡೆಸುತ್ತಿರುವ ರೈತರನ್ನು ಹತ್ತಿಕ್ಕುವ ಸಲುವಾಗಿ ವಿದ್ಯುತ್, ನೀರಿ ಮೊದಲಾದ ಮೂಲ ಸೌಕರ್ಯಗಳನ್ನು ನಿಲ್ಲಿಸಲಾಗಿದೆ. ರೈತರು ಬಳಸುತ್ತಿದ್ದ ಸಾರ್ವಜನಿಕ ಶೌಚಾಲಯಗಳನ್ನೂ ಬಂದ್ ಮಾಡಲಾಗಿದ್ದು ರೈತರ ಪರಿಸ್ಥಿತಿ ಹೇಳತೀರದಾಗಿದೆ. ಸರ್ಕಾರದ ಈ ನಡೆಯನ್ನು ಆಮ್ ಆದ್ಮಿ ಪಕ್ಷದ ನಾಯರಕರೂ ಸೇರಿದಂತೆ ಹಲವರು ಖಂಡಿಸಿದ್ದಾರೆ.