ಬೆಂಗಳೂರು, ಮೇ. 11: ಇಂದಿರಾ ಕ್ಯಾಂಟೀನ್‌ಗಳಲ್ಲಿ ಆಹಾರವನ್ನು ಉಚಿತವಾಗಿ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶ ಹೊರಡಿಸಿದೆ.
ಸ್ಥಳೀಯ ಸಂಸ್ಥೆಗಳು ಆಹಾರ ವಿತರಣೆಯನ್ನು ಕೈಗೊಳ್ಳಬೇಕು, ತಮ್ಮ ಚಟುವಟಿಕೆಯನ್ನು ಮುಂದುವರೆಸಬೇಕು. ಇಂದಿರಾ ಕ್ಯಾಂಟೀನ್‌ಗಳಲ್ಲಿ ಆಹಾರವನ್ನು ಉಚಿತವಾಗಿ ನೀಡಬೇಕು. ಪಡಿತರ ಧಾನ್ಯದ ಕಿಟ್‌ಗಳನ್ನು ಅರ್ಹ ವ್ಯಕ್ತಿಗಳ ಮನೆಬಾಗಿಲಿಗೆ ತಲುಪಿಸಬೇಕು. ಅದರಲ್ಲಿರುವ ಆಹಾರ ವಸ್ತುಗಳ ಪ್ರಮಾಣವು 21 ದಿನಕ್ಕೆ ಸಾವಕಾಶವಾಗಿ ಆಗುವಂತಿರಬೇಕು ಎಂದು ಸೂಚಿಸಿದೆ.
ಆಹಾರ ಭದ್ರತೆ ವಿಚಾರವಾಗಿ ಕೈಗೊಂಡಿರುವ ಕ್ರಮಗಳ ಬಗ್ಗೆ ರಾಜ್ಯ ಸರ್ಕಾರಿಂದ ಹೈಕೋರ್ಟ್ ಮಾಹಿತಿ ಪಡೆಯಿತು. ಆಹಾರದ ಅಗತ್ಯವಿರುವ ಎಲ್ಲರಿಗೂ ನಾಳೆಯಿಂದ ಇಂದಿರಾ ಕ್ಯಾಂಟೀನ್‌ಗಳಲ್ಲಿ ಮೂರು ಹೊತ್ತು ಊಟ ನೀಡುವುದಾಗಿ ಎಜಿ ಪ್ರಭುಲಿಂಗ ನಾವದಗಿ ತಿಳಿಸಿದರು. ಕಟ್ಟಡ ಕಾರ್ಮಿಕರಿಗೆ ಊಟವನ್ನು ನೀಡಲು ಬಿಲ್ಡರ್‌ಗಳಿಗೆ ಸೂಚಿಸಿರುವುದಾಗಿ ಮಾಹಿತಿ ನೀಡಿದ್ದಾರೆ. ರೇಷನ್ ಕಾರ್ಡ್ ಇಲ್ಲದವರಿಗಾಗಿ ಇಂದಿರಾ ಕ್ಯಾಂಟೀನ್‌ಗಳು ಕಾರ್ಯನಿರ್ವಹಿಸಲಿವೆ.
ಕೇವಲ 186 ಇಂದಿರಾ ಕ್ಯಾಂಟೀನ್‌ಗಳಿವೆ, 1000 ಕೊಳಗೇರಿಗಳಿವೆ. ಇಂದಿರಾ ಕ್ಯಾಂಟೀನ್‌ಗೆ ಲಾಕ್‌ಡೌನ್ ಸಂದರ್ಭದಲ್ಲಿ ಜನ ಹೇಗೆ ಬರಲು ಸಾಧ್ಯ ಎಂದು ಪೀಠ ಪ್ರಶ್ನಿಸಿದೆ. ಸರ್ಕಾರದೊಂದಿಗೆ ಸಹಭಾಗಿತ್ವ ಹೊಂದಿರುವ ಎನ್‌ಜಿಒಗಳ ಪಾತ್ರವೇನು? ಅಗತ್ಯವಿರುವ ಎಲ್ಲರಿಗೂ ಆಹಾರ ದೊರೆಯಬೇಕು. ದೈನಂದಿನ ಕೂಲಿ ಲಭ್ಯವಾಗದ ಎಲ್ಲರಿಗೂ ಆಹಾರ ಸಿಗಬೇಕು. ಯಾರೊಬ್ಬರೂ ಹೊರಗುಳಿಯಬಾರದು. ವ್ಯವಸ್ಥಿತವಾಗಿ, ಕ್ರಮಬದ್ಧವಾಗಿ ಇದು ಸಾಧ್ಯವಾಗಬೇಕು ಎಂದು ರಾಜ್ಯ ಸರ್ಕಾರಕ್ಕೆ ತಾಕೀತು ಪೀಠ ತಾಕೀತು ಮಾಡಿತು.
ಆದ್ಯತಾ ರಹಿತ ಪಡಿತರ ಚೀಟಿ (ಎನ್‌ಪಿಎಚ್‌ಎಚ್) ಹೊಂದಿರುವವರಿಗೆ 10 ಕೆಜಿ ಆಹಾರ ಧಾನ್ಯವನ್ನು ರೂ. 50ಕ್ಕೆ ಕೊಡಬೇಕು ಎನ್ನುವ ಪ್ರಸ್ತಾಪವಿದೆ. ಈ ಸಂಬಂಧ ಸರ್ಕಾರ ತಕ್ಷಣ ನಿರ್ಧಾರ ತೆಗೆದುಕೊಂಡು ಕೂಡಲೇ ಅನುಷ್ಠಾನಗೊಳಿಸಬೇಕು ಎಂದು ಹೈಕೋರ್ಟ್ ಆದೇಶ ಹೊರಡಿಸಿದೆ.