ಹುಬ್ಬಳ್ಳಿ, ಮೇ. 22: ಕಪ್ಪು ಶಿಲೀಂಧ್ರ ಸೋಂಕು ಕಡಿಮೆಯಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಸೋಂಕಿತರಿಗೆ ಉಚಿತವಾಗಿ ಸರಿಯಾದ ಚಿಕಿತ್ಸೆ ಕೊಡಲಾಗುವುದು ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ಲ್ಯಾಕ್ ಫಂಗಸ್ ನಿಂದ ಸಾವಿನ ಪ್ರಮಾಣ ಜಾಸ್ತಿ ಆಗಿಲ್ಲ. ವರ್ಷಕ್ಕೆ 10 ಜನ ಇರುತ್ತಾ ಇದ್ದರು. ಆದರೆ ಈಗ 250 ಜನ ಸೋಂಕಿತರು ರಾಜ್ಯದಲ್ಲಿ ಇದ್ದಾರೆ. ಹೀಗಾಗಿ ಅವರಿಗೆಲ್ಲ ಎಷ್ಟು ಔಷಧಿ ಬೇಕೋ ಇವೆಲ್ಲವನ್ನು ಸರ್ಕಾರ ನೀಡಲಿದೆ ಎಂದರು.
ಕೇಂದ್ರ ಸಚಿವ ಡಿವಿ ಸದಾನಂದ ಗೌಡರು ಶೀಘ್ರದಲ್ಲೇ ಔಷಧಿ ವಿತರಿಸುವುದಾಗಿ ಹೇಳಿದ್ದಾರೆ. ಬ್ಲ್ಯಾಕ್ ಫಂಗಸ್ ನಿಂದ ಬಳಲುತ್ತಿರುವ ಸೋಂಕಿತರಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತೇವೆ. ಇದರಲ್ಲಿ ಬ್ಲ್ಯಾಕ್, ವೈಟ್ ಅಂತೇನಿಲ್ಲ. ಅದು ಕೇವಲ ಫಂಗಸ್ ಅಷ್ಟೇ. ಕಲರ್ ಬಗ್ಗೆ ಏನಿಲ್ಲ, ಅದು ಹೇಗೆ ಬರುತ್ತೆ ಎಂದು ನಾನು ಈಗಾಗಲೇ ಮಾತನಾಡಿದ್ದೇನೆ. ಬ್ಲ್ಯಾಕ್ ಫಂಗಸ್ ಸಲುವಾಗಿ ಈಗಾಗಲೇ ತಜ್ಞರ ಸಮಿತಿ ರಚನೆ ಮಾಡಿದ್ದು, ಸಮಿತಿ ವರದಿ ನೀಡಿದೆ. ಜಾಸ್ತಿ ದಿನ ಐಸಿಯು ನಲ್ಲಿದ್ದವರು, ಆಕ್ಸಿಜನ್ ಪಡೆದವರಲ್ಲಿ ಈ ಫಂಗಸ್ ಕಾಣಿಸಿಕೊಂಡಿದೆ ಎಂದರು. ನಂತರ ಕಿಮ್ಸ್ ನ ವೈದ್ಯರೊಂದಿಗೆ ಸಭೆ ನಡೆಸಿದರು.