ಚೆನ್ನೈ, ಜು. 24: ಕೇಂದ್ರ ಸರ್ಕಾರವು ಖಾಸಗಿ ಆಸ್ಪತ್ರೆಗಳಿಗೆ ಹಂಚುವ ಕೋವಿಡ್ ಲಸಿಕೆಯ ಗರಿಷ್ಠ ಬಳಕೆಗೆ ತಮಿಳುನಾಡು ಸರ್ಕಾರ ಮಾರ್ಗವೊಂದನ್ನು ಕಂಡುಕೊಂಡಿದೆ.
ಖಾಸಗಿ ಆಸ್ಪತ್ರೆಗಳ ಕೋಟಾದಡಿ ಹಂಚಿಕೆಯಾಗಿರುವ ಲಸಿಕೆಗಳನ್ನು ಕಾರ್ಪೋರೇಟ್ ಮತ್ತು ಖಾಸಗಿ ಸಂಸ್ಥೆಗಳು ತಮ್ಮ ಸಾಮಾಜಿಕ ಜವಾಬ್ದಾರಿ ನಿಧಿಯಡಿ (ಸಿಎಸ್ಆರ್) ಖರೀದಿಸಿ, ಅವುಗಳನ್ನು ಜನರಿಗೆ ಉಚಿತವಾಗಿ ವಿತರಿಸುವಂತೆ ತಮಿಳುನಾಡು ಸರ್ಕಾರ ಕೋರಿದೆ.
ಈ ಯೋಜನೆಗಾಗಿ ಆರೋಗ್ಯ ಇಲಾಖೆಯು ವಿವಿಧ ಕಂಪನಿಗಳಿಂದ ಈಗಾಗಲೇ ₹4 ಕೋಟಿ ಸಂಗ್ರಹಿಸಿದ್ದು, ಮುಂದಿನ ವಾರ ಚೆನ್ನೈನಲ್ಲಿ ಚಾಲನೆ ದೊರೆಯಲಿದೆ. ಅಲ್ಲದೆ, ಆಸಕ್ತ ವ್ಯಕ್ತಿಗಳೂ ತಾವು ಬಯಸಿದ ಆಸ್ಪತ್ರೆಗಳಲ್ಲಿ ಜನ ಸಾಮಾನ್ಯರಿಗೆ ಉಚಿತವಾಗಿ ಲಸಿಕೆ ಕೊಡಿಸಲು ಪ್ರಾಯೋಜಕತ್ವ ಪಡೆಯಬಹುದು. ಇದಕ್ಕೆ ಪೂರಕವಾದ ಅವಕಾಶವನ್ನು ಒದಗಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.
ಖಾಸಗಿ ಆಸ್ಪತ್ರೆಗಳಿಗೆ ಹಂಚಿಕೆಯಾಗಿರುವ ಕೋವಿಡ್ ಲಸಿಕೆಗಳು ದುಬಾರಿ ಬೆಲೆಯ ಕಾರಣ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ ಎಂಬುದನ್ನು ಮನಗಂಡಿರುವ ಸರ್ಕಾರ ಈ ಯೋಜನೆ ಜಾರಿಗೊಳಿಸುತ್ತಿದೆ.