ಬೆಂಗಳೂರು, ಜೂ.17: ಸದ್ಯ ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಾಣುತ್ತಿದೆ. ಹೀಗಾಗಿ ಜೂನ್ 14ರಿಂದ ಬೆಂಗಳೂರು ಸೇರಿ 19 ಜಿಲ್ಲೆಗಳಲ್ಲಿ ಮೊದಲನೇ ಹಂತದ ಅನ್ಲಾಕ್ ಜಾರಿಗೊಳಿಸಲಾಗಿದ್ದು, ಕೆಲವು ಕ್ಷೇತ್ರಗಳಿಗೆ ವಿನಾಯಿತಿ ನೀಡಲಾಗಿದೆ. ಜೂನ್ 21ರಿಂದ 2ನೇ ಹಂತದ ಅನ್ಲಾಕ್ ಪ್ರಕ್ರಿಯೆ ಆರಂಭವಾಗಲಿದೆ. ಆಗ ಇನ್ನೂ ಹೆಚ್ಚಿನ ವಿನಾಯಿಯಿ ಸಿಗುತ್ತೆ ಎನ್ನಲಾಗುತ್ತಿದೆ. ಲಾಕ್ಡೌನ್ ಕಾರಣದಿಂದ ಸಂಚಾರ ಸ್ಥಗಿತಗೊಳಿಸಿದ್ದ ಬಿಎಂಟಿಸಿ ಬಸ್ಗಳು ಜೂನ್ 21ರಿಂದ ಕಾರ್ಯಾಚರಣೆ ಆರಂಭಿಸಲಿವೆ ಎನ್ನಲಾಗುತ್ತಿದೆ.
ಹೌದು, ಜೂನ್ 21ರಿಂದ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ಗಳು ಸಂಚಾರ ಆರಂಭಿಸಲಿವೆ. ಸದ್ಯ ರಾಜ್ಯ ರಾಜಧಾನಿಯಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಜೊತೆಗೆ ಮೊದಲ ಹಂತದ ಅನ್ಲಾಕ್ ಕೂಡ ಮಾಡಲಾಗಿದೆ. ಇದೇ ಸೋಮವಾರದಿಂದ ಎರಡನೇ ಹಂತದ ಅನ್ಲಾಕ್ ಪ್ರಕ್ರಿಯೆ ಆರಂಭವಾಗಲಿದೆ. ಅಂದಿನಿಂದ ಸಾರ್ವಜನಿಕ ಸಾರಿಗೆಗೆ ಅನುಮತಿ ನೀಡಲು ಬಿಬಿಎಂಪಿ ನಿರ್ಧಾರ ಮಾಡಿದೆ.
ಮೊದಲ ಹಂತದ ಲಾಕ್ಡೌನ್ ಸಡಿಲಿಕೆ ವೇಳೆ ಬಿಬಿಎಂಪಿ ಸಾರ್ವಜನಿಕ ಸಾರಿಗೆಗೆ ವಿನಾಯಿತಿ ಬೇಡ ಎಂದಿತ್ತು. ಸಾರ್ವಜನಿಕ ಸಾರಿಗೆಗೆ ಅವಕಾಶ ನೀಡಿದ್ರೆ ಸೋಂಕು ಹೆಚ್ಚಳವಾಗಲಿದೆ. ಹೀಗಾಗಿ ಸದ್ಯಕ್ಕೆ ಬಸ್ ಸಂಚಾರಕ್ಕೆ ಅನುಮತಿ ಬೇಡ ಎಂದು ಪಾಲಿಕೆ ಸರ್ಕಾರಕ್ಕೆ ಮನವಿ ಮಾಡಿತ್ತು.
ನಗರದಲ್ಲಿ ಬಿಎಂಟಿಸಿ ಬಸ್ಗಳನ್ನ ರಸ್ತೆಗಿಳಿಸಲು ಜನಪ್ರತಿನಿಧಿಗಳು, ಸಾರ್ವಜನಿಕರಿಂದ ಒತ್ತಡ ಕೇಳಿ ಬಂದಿತ್ತು. ಬಿಬಿಎಂಪಿ ವ್ಯಾಪ್ತಿಯಲ್ಲಿ ಬಸ್ ಸಂಚಾರಕ್ಕೆ ಅವಕಾಶ ನೀಡುವಂತೆ ಬಿಬಿಎಂಪಿ ಮೇಲೆ ಒತ್ತಡ ಇತ್ತು. ಸದ್ಯ ಒತ್ತಡಕ್ಕೆ ಮಣಿದಿರುವ ಬಿಬಿಎಂಪಿ ಬಸ್ ಸಂಚಾರ ಮರು ಪ್ರಾರಂಭಿಸುವ ನಿರ್ಧಾರ ತೆಗೆದುಕೊಂಡಿದೆ. ಸೋಮವಾರದಿಂದ ನಗರದಲ್ಲಿ ಬಸ್ ಸಂಚಾರಕ್ಕೆ ಅನುಮತಿ ನೀಡಲು ನಿರ್ಧಾರ ಮಾಡಿದೆ.
ಬಸ್ಗಳಿಗೆ ಅನುಮತಿ ನೀಡಿದ್ರೆ ಏನೆಲ್ಲಾ ಷರತ್ತುಗಳನ್ನ ವಿಧಿಸಬೇಕು ಎಂಬ ಬಗ್ಗೆ ಮುಖ್ಯ ಆಯುಕ್ತ ಗೌರವ್ ಗುಪ್ತಾ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆದಿದೆ. ಅಧಿಕಾರಿಗಳ ಅಭಿಪ್ರಾಯ ಪಡೆದು ಷರತ್ತುಬದ್ಧ ಅನುಮತಿ ನೀಡಲು ಬಿಬಿಎಂಪಿ ಒಪ್ಪಿಗೆ ಕೊಟ್ಟಿದೆ. ಈ ವಿಚಾರವಾಗಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಬಿಎಂಟಿಸಿ ಎಂಡಿ ಜತೆ ಮಾತುಕತೆ ನಡೆದಿದೆ. ಜತೆಗೆ ಗೌರವ್ ಗುಪ್ತಾ ಅವರು ನಗರ ಪೊಲೀಸ್ ಕಮಿಷನರ್, ಆರೋಗ್ಯ ಇಲಾಖೆ ಅಧಿಕಾರಿಗಳ ಜತೆಯೂ ಚರ್ಚಿಸಿದ್ದಾರೆ.
ಏನೆಲ್ಲಾ ಷರತ್ತುಗಳೊಂದಿಗೆ ಸಾರ್ವಜನಿಕ ಸಾರಿಗೆಗೆ ಅನುಮತಿ ನೀಡಲು ಬಿಬಿಎಂಪಿ ಮುಂದಾಗಿದೆ. ಆ ಷರತ್ತುಗಳು ಈ ಕೆಳಗಿನಂತಿವೆ:
- ಶೇಕಡಾ 50ರಷ್ಟು ಬಸ್ಸುಗಳನ್ನ ಮಾತ್ರ ರಸ್ತೆಗಿಳಿಸಲು ಅನುಮತಿ.
- ಬಸ್ಸುಗಳಲ್ಲಿ ಶೇಕಡಾ 50ರಷ್ಟು ಪ್ರಯಾಣಿಕರಿಗೆ ಸಂಚಾರಕ್ಕೆ ಅನುಮತಿ.
- ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯ.
- ಬಸ್ಸುಗಳಲ್ಲಿ ಒಂದು ಆಸನ ಬಿಟ್ಟು ಒಂದು ಆಸನದಲ್ಲಿ ಕುಳಿತು ಪ್ರಯಾಣಿಸಲು ಅವಕಾಶ.
- ನಿಂತುಕೊಂಡು ಪ್ರಯಾಣಿಸೋದಕ್ಕೆ ಅವಕಾಶ ಇಲ್ಲ.
- ಬಸ್ ನಿಲ್ದಾಣಗಳಲ್ಲಿ ಜನಸಂದಣಿ ಆಗದಂತೆ ನೋಡಿಕೊಳ್ಳುವ ಜವಬ್ದಾರಿ ಪೊಲೀಸ್ ಇಲಾಖೆ ಮತ್ತು ಬಿಎಂಟಿಸಿ ಅಧಿಕಾರಿಗಳಿಗೆ.
- ಮೆಜೆಸ್ಟಿಕ್, ಟರ್ಮಿನಲ್ಸ್, ಪ್ರಮುಖ ಬಸ್ ನಿಲ್ದಾಣಗಳಲ್ಲಿ ಕೋವಿಡ್ ಟೆಸ್ಟ್ ಕಡ್ಡಾಯ.
- ನೈಟ್ ಕರ್ಫ್ಯೂ ಆರಂಭಕ್ಕೂ ಮುನ್ನ 7 ಗಂಟೆ ಒಳಗೆ ಬಸ್ ಸಂಚಾರ ನಿಲ್ಲಿಸಬೇಕು.
ಇನ್ನು, ಅನ್ಲಾಕ್ ಆದ ಬಳಿಕ ಬಿಎಂಟಿಸಿ ಟಿಕೆಟ್ ದರ ಏರಿಕೆ ಆಗುತ್ತದೆ ಎಂಬ ಸುದ್ದಿ ಕೇಳಿ ಬಂದಿತ್ತು. ಈ ಬಗ್ಗೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಸ್ಪಷ್ಟನೆ ಕೂಡ ನೀಡಿದ್ದರು. ಟಿಕೆಟ್ ದರದಲ್ಲಿ ಯಾವುದೇ ಏರಿಕೆ ಇಲ್ಲ . ಅಧಿಕಾರಿಗಳು ದರ ಹೆಚ್ಚಳ ಮಾಡಲು ಪ್ರಸ್ತಾವನೆ ಸಲ್ಲಿಸಿದ್ದತು. ಬಡವರು ಈಗಾಗಲೇ ಸಂಕಷ್ಟದಲ್ಲಿದ್ದಾರೆ. ಅವರ ಮೇಲೆ ಮತ್ತೆ ಹೊರೆ ಹಾಕುವುದಿಲ್ಲ. ಟಿಕೆಟ್ ದರ ಏರಿಕೆ ಮಾಡಲ್ಲ ಎಂದು ಸಚಿವರು ಸ್ಪಷ್ಟನೆ ನೀಡಿದ್ದರು.