ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾನ್ಪುರ್ (ಐಐಟಿ-ಕೆ) ಸಂಶೋಧಕರು ಕೋವಿಡ್ -19ರ ನಾಲ್ಕನೇ ಅಲೆ ಇದೇ ಜೂನ್ 22 ರಂದು ದೇಶದಲ್ಲಿ ಪ್ರಾರಂಭವಾಗಬಹುದು ಎಂದು ತಿಳಿಸಿದ್ದಾರೆ. ಅಧ್ಯಯನದ ಪ್ರಕಾರ, ಜೂನ್ ಮಧ್ಯದಲ್ಲಿ ಭಾರತವು ನಾಲ್ಕನೇ ಕೋವಿಡ್ ಅಲೆಗೆ ತತ್ತರಿಸಲಿದೆ ಎಂದು ಮುನ್ಸೂಚನೆಯನ್ನು ನೀಡಿದೆ. ಮತ್ತೆ ಕೋವಿಡ್ ಉಲ್ಬಣವಾಗುವ ಮುಖೇನ ಸುಮಾರು ನಾಲ್ಕು ತಿಂಗಳವರೆಗೆ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ. ಈ ನಾಲ್ಕನೆ ಅಲೆಯ ತೀವ್ರತೆಯು ಹೊಸ ರೂಪಾಂತರಗಳ ಹೊರಹೊಮ್ಮುವಿಕೆ, ವ್ಯಾಕ್ಸಿನೇಷನ್ ಸ್ಥಿತಿ ಮತ್ತು ಬೂಸ್ಟರ್ ಡೋಸ್ಗಳ ಬೇಡಿಕೆಗಳನ್ನು ಅವಲಂಬಿಸಿರುತ್ತದೆ ಎಂದು ಅಧ್ಯಯನವು ಹೇಳಿದೆ.

ಜಿಂಬಾಬ್ವೆಯಲ್ಲಿನ ದತ್ತಾಂಶದ ಆಧಾರದ ಮೇಲೆ ಗಾಸಿಯನ್ ವಿತರಣೆಯ ಮಿಶ್ರಣವನ್ನು ಬಳಸಿಕೊಂಡು ಐಐಟಿ ಕಾನ್ಪುರದ ಗಣಿತ ವಿಭಾಗದ ಸಬರ ಪರ್ಷದ್ ರಾಜೇಶ್ಭಾಯ್, ಸುಭ್ರಾ ಶಂಕರ್ ಧರ್ ಮತ್ತು ಶಲಭ್ ಅವರು ಸಂಶೋಧನೆಯ ನೇತೃತ್ವ ವಹಿಸಿದ್ದರು ಎನ್ನಲಾಗಿದೆ. ಈ IIT-K ಅಧ್ಯಯನವನ್ನು MedRxiv ನಲ್ಲಿ ಪ್ರಿ-ಪ್ರಿಂಟ್ ಆಗಿ ಪ್ರಕಟಿಸಲಾಗಿದೆ ಮತ್ತು ಇನ್ನೂ ಪೀರ್-ರಿವ್ಯೂ ಮಾಡಬೇಕಾಗಿದೆ.

ಸಂಶೋಧಕರು ಪ್ರಕಟಣೆಯಲ್ಲಿ ತಿಳಿಸಿರುವ ಅನುಸಾರ, ಭಾರತದಲ್ಲಿ ಕೋವಿಡ್ನ ನಾಲ್ಕನೇ ತರಂಗವು ಆರಂಭಿಕ ಡೇಟಾ ಲಭ್ಯತೆಯ ದಿನಾಂಕದಿಂದ 936 ದಿನಗಳ ನಂತರ ಆಗಮಿಸುತ್ತದೆ ಎಂದು ಸೂಚಿಸುತ್ತದೆ. ಅಂದರೆ ಜನವರಿ 30, 2020. ಆದ್ದರಿಂದ, ನಾಲ್ಕನೇ ಅಲೆಯೂ ಜೂನ್ 22, 2022 ರಿಂದ ಪ್ರಾರಂಭವಾಗುತ್ತದೆ. ಆಗಸ್ಟ್ 23, 2022 ರಂದು ಗರಿಷ್ಠ ಮತ್ತು ಅಕ್ಟೋಬರ್ 24, 2022 ರಂದು ಕೊನೆಗೊಳ್ಳುವ ಸಾಧ್ಯತೆ ಇದೆ ಎಂದು ಅಧ್ಯಯನ ಹೇಳಿದೆ.