- ಮತ್ತೆ ಮುನ್ನಲೆಗೆ ಬಂದ ಕಸದ ಸಮಸ್ಯೆ
- ಕಾಯಂ ಉದ್ಯೋಗ, ನೇರ ವೇತನ ನೀಡುವಂತೆ ಸರ್ಕಾರದ ವಿರುದ್ಧ ಸ್ಟ್ರೈಕ್
- ಫ್ರೀಡಂ ಪಾರ್ಕ್ ನಲ್ಲಿ ಅನುಮತಿ ನೀಡದ ಕಾರಣ ಗಾಂಧಿನಗರದಲ್ಲಿ ತೀವ್ರ ಪ್ರತಿಭಟನೆ (Garbage problem in Bengaluru)
Bengaluru: ಬೆಂಗಳೂರು ನಗರವು ಮತ್ತೊಮ್ಮೆ ಕಸದ ಸಂಕಷ್ಟ ಎದುರಿಸುವ ಪರಿಸ್ಥಿತಿಯಲ್ಲಿದೆ. ಗಾಂಧಿನಗರ(Gandhinagar) ವಿಧಾನಸಭಾ ವ್ಯಾಪ್ತಿಯಲ್ಲಿ ಸೋಮವಾರ ಬೆಳಿಗ್ಗೆ
ಕಸದ ಆಟೋ ಮತ್ತು ಲಾರಿ ಚಾಲಕರು ಆಕಸ್ಮಿಕವಾಗಿ ಪ್ರತಿಭಟನೆಗೆ ಇಳಿದಿದ್ದು, ಕಸ ಸಂಗ್ರಹ ಕಾರ್ಯವನ್ನು ಸಂಪೂರ್ಣ ನಿಲ್ಲಿಸಿದ್ದಾರೆ.
ಇದರಿಂದ ನಗರದ ಹಲವು ಭಾಗಗಳಲ್ಲಿ ಈಗಾಗಲೇ ಕಸದ ದಿಬ್ಬಗಳು ಜಮಾಯಿಸುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಉಂಟುಮಾಡಿದೆ. ಇನ್ನು ಈ ಪ್ರತಿಭಟನೆಯ ಮೂಲ ಕಾರಣವೇ
ಚಾಲಕರು ಮತ್ತು ಕಾರ್ಮಿಕರ ಕಾಯಂ ಉದ್ಯೋಗ(Permanent employment) ಹಾಗೂ ನೇರ ವೇತನದ ಬೇಡಿಕೆ. ಸುಮಾರು 5,300 ಆಟೋ ಟಿಪ್ಪರ್‌ಗಳು ಮತ್ತು 700 ಲಾರಿಗಳು
ನಗರದಲ್ಲಿ ಪ್ರತಿದಿನ ಕಸ ಸಂಗ್ರಹಣೆ(Garbage collection) ನಡೆಸುತ್ತಿವೆ. ಇವುಗಳ ಚಾಲಕರು ಹಾಗೂ ಸಿಬ್ಬಂದಿ ಕಳೆದ ಹಲವು ವರ್ಷಗಳಿಂದಲೇ ಕಾಂಟ್ರಾಕ್ಟ್ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ.
ಅನೇಕ ಬಾರಿ ಸರ್ಕಾರದ ಮುಂದಾಳತ್ವದಲ್ಲಿ ಮಾತುಕತೆ ನಡೆದಿದ್ದರೂ, ಭರವಸೆಗಳಷ್ಟೇ ದೊರೆತು ಫಲಿತಾಂಶ ಕೈಗೂಡಿಲ್ಲ.
ಅಲ್ಲದೆ 2025ರ ಮೇ ತಿಂಗಳಲ್ಲಿ ಕಾರ್ಮಿಕ ದಿನಾಚರಣೆಯ ಸಂದರ್ಭದಲ್ಲಿ, ಸರ್ಕಾರವು ಚಾಲಕರಿಗೆ ಮತ್ತು ಕಾರ್ಮಿಕರಿಗೆ ಕಾಯಂ ಉದ್ಯೋಗ ನೀಡುವ ಭರವಸೆ ನೀಡಿತ್ತು.

ಆದರೆ, ಅದರ ಅನುಷ್ಠಾನವಾಗದೆ ಉಳಿದಿರುವುದರಿಂದ, ಜೊತೆಗೆ ವೇತನ ವಿತರಣೆಯಲ್ಲಿಯೂ ವಿಳಂಬ ಕಂಡುಬಂದಿರುವುದರಿಂದ, ಕಾರ್ಮಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ಪ್ರತಿಭಟನೆ ನಡೆಸಲು ಫ್ರೀಡಂ ಪಾರ್ಕ್‌ನಲ್ಲಿ(Freedom Park) ಅನುಮತಿ ನೀಡದಿರುವುದು ಚಾಲಕರ ಅಸಮಾಧಾನವನ್ನು ಮತ್ತಷ್ಟು ಹೆಚ್ಚಿಸಿತು.
ಈ ಹಿನ್ನೆಲೆಯಲ್ಲಿ ಗಾಂಧಿನಗರದ ಮುಖ್ಯರಸ್ತೆಗಳಲ್ಲಿ ಆಟೋ ಮತ್ತು ಲಾರಿಗಳನ್ನು ನಿಲ್ಲಿಸಿ ಪ್ರತಿಭಟನೆ ನಡೆಸಲಾಯಿತು. ರಸ್ತೆ ತಡೆ ಪ್ರತಿಭಟನೆ ನಡೆಸಿದ ಕಾರಣ ಸಂಚಾರ ವ್ಯವಸ್ಥೆಗೆ ಗೊಂದಲ ಉಂಟಾಯಿತು.
ಪೊಲೀಸರು ತಕ್ಷಣವೇ ಮಧ್ಯಪ್ರವೇಶಿಸಿ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಬಿಎಂಟಿಸಿ ಬಸ್‌ಗಳಲ್ಲಿ ಕರೆದೊಯ್ದರು.
ಆದರೆ ಬಿಬಿಎಂಪಿ(BBMP) ಕಾರ್ಮಿಕರು ಸರ್ಕಾರವು ಭರವಸೆ ಈಡೇರಿಸುವವರೆಗೆ ನಾವು ಕೆಲಸಕ್ಕೆ ಹಿಂತಿರುಗುವುದಿಲ್ಲ ಎಂದು ಘೋಷಿಸಿದ್ದಾರೆ.
ಪ್ರತಿಭಟನೆಗೆ ಜಾಗ ಕೊಡದೇ ಸರ್ಕಾರ ದೌರ್ಜನ್ಯ ಮಾಡುತ್ತಿದೆ ಎಂಬ ಆರೋಪವೂ ಪ್ರತಿಭಟನೆಯಲ್ಲಿ ಕೇಳಿಬಂದಿದೆ. ಇನ್ನು ಈ ಪ್ರತಿಭಟನೆಯ ಪರಿಣಾಮವಾಗಿ ನಗರದ ಹಲವೆಡೆ ಕಸ ಎಸೆಯದಿದ್ದರೂ ಜಮಾಯಿಸುತ್ತಿದ್ದು,
ಸಾರ್ವಜನಿಕರಲ್ಲಿ ಆರೋಗ್ಯ ಸಂಬಂಧಿ ಭೀತಿ ಉಂಟಾಗಿದೆ. ಈಗಾಗಲೇ ಮಳೆಗಾಲ ಪ್ರಾರಂಭವಾಗಿರುವುದರಿಂದ, ಕಸದ ಸರಿಯಾದ ನಿರ್ವಹಣೆ ನಡೆಯದಿದ್ದರೆ ರೋಗ ವ್ಯಾಪಕವಾಗುವ ಆತಂಕ ವ್ಯಕ್ತವಾಗಿದೆ.
ಈ ಪ್ರತಿಭಟನೆ ಹೊಸದಲ್ಲ. 2025ರ ಮಾರ್ಚ್ ತಿಂಗಳಲ್ಲೇ ಬೆಂಗಳೂರು ಸಾಲಿಡ್ ವೇಸ್ಟ್ ಮ್ಯಾನೇಜ್‌ಮೆಂಟ್ ಲಿಮಿಟೆಡ್ (BSWML) ಕಾರ್ಮಿಕರು ಇದೇ ರೀತಿಯ ಬೇಡಿಕೆಗಳಿಗಾಗಿ ಧರಣಿ ನಡೆಸಿದ್ದರು.
ಆಗ IPD ಸಲಪ್ಪಾ ಸಮಿತಿಯ ಶಿಫಾರಸುಗಳನ್ನು ಜಾರಿಗೆ ತರಬೇಕೆಂದು ಒತ್ತಾಯಿಸಲಾಗಿತ್ತು. ವಿಶೇಷವಾಗಿ ಕಾಂಟ್ರಾಕ್ಟ್ ವ್ಯವಸ್ಥೆಯನ್ನು ರದ್ದುಪಡಿಸಿ, ನೇರವಾಗಿ ಸರ್ಕಾರದಿಂದಲೇ ಉದ್ಯೋಗ ಮತ್ತು ವೇತನ
ನೀಡಬೇಕೆಂಬುದು ಕಾರ್ಮಿಕರ ಪ್ರಮುಖ ಬೇಡಿಕೆಯಾಗಿದೆ.ಆಗಲೂ ಸುಮಾರು 5,000 ಕಾರ್ಮಿಕರು ಬಿಬಿಎಂಪಿ ಕಚೇರಿಯ ಮುಂದೆ ಕೂತು ಪ್ರತಿಭಟನೆ ನಡೆಸಿದ್ದರು. ಆದಾಗ ಸರ್ಕಾರದಿಂದ ಮಾತುಕತೆ ನಡೆದರೂ,
ಇದನ್ನು ಓದಿ : ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವದನ್ನು ತಡೆಯಲು ಮುಂದಾದ ಜಿಬಿಎ : ಭಾರಿ ದಂಡ ವಿಧಿಸಲು ಪ್ಲಾನ್
ಇಂದಿಗೂ ಆ ಬೇಡಿಕೆಗಳಿಗೆ ಸ್ಪಂದನೆ ದೊರೆತಿಲ್ಲ. ಹಾಗಾಗಿ ಮತ್ತೊಮ್ಮೆ ಪ್ರತಿಭಟನೆ ಮಾಡುವ ಮೂಲಕ ತಮ್ಮ ಬೇಡಿಕೆಗಳಿಗೆ ಸ್ಪಂದಿಸುವಂತೆ ಕಾರ್ಮಿಕರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. (Garbage problem in Bengaluru)