ಹೊಸದಿಲ್ಲಿ, ಮಾ. 01: ಪೆಟ್ರೋಲ್, ಡೀಸೆಲ್ ಸೇರಿದಂತೆ ದಿನನಿತ್ಯ ಬಳಕೆ ವಸ್ತುಗಳ ಬೆಲೆಯೂ ಏರುತ್ತಲೇ ಇದೆ. ಈ ಮಧ್ಯೆ ಗ್ಯಾಸ್ ಸಿಲಿಂಡರ್ ಬೆಲೆ ಮತ್ತೆ ಏರಿಕೆ ಕಂಡಿದ್ದು, ಜನತೆಗೆ ಶಾಕ್ ನೀಡಿದೆ.
ಎಲ್‌ಪಿಜಿ ಸಿಲಿಂಡರ್ ಬೆಲೆ ಸೋಮವಾರ ಮತ್ತೆ 25 ರೂ. ಹೆಚ್ಚಳವಾಗಿದೆ. ಮೂರು ದಿನಗಳ ಹಿಂದೆಯಷ್ಟೇ 25 ರೂ. ಏರಿಕೆಯಾಗಿತ್ತು. ಬೆಲೆ ಏರಿಕೆಯಿಂದಾಗಿ ಈಗ 5 ಕೆ.ಜಿ. ತೂಕದ ಗ್ಯಾಸ್ ಸಿಲಿಂಡರ್‌ಗೆ 304 ಹಾಗೂ 14.2 ಕೆ.ಜಿ. ತೂಕದ ಗ್ಯಾಸ್ ಸಿಲಿಂಡರ್‌ಗೆ 824 ರೂ. ತಲುಪಿದ್ದು, ಇಂದಿನಿಂದಲೇ ಹೊಸ ದರ ಜಾರಿಗೆ ಬಂದಿದೆ.
ಫೆಬ್ರವರಿ ತಿಂಗಳಿನಿಂದ ಈವರೆಗೆ ಒಟ್ಟು 4 ಬಾರಿ ಗ್ಯಾಸ್ ಬೆಲೆ ಹೆಚ್ಚಾಗಿದೆ. ಕಳೆದ ವಾರವೂ ಗ್ಯಾಸ್ ಸಿಲಿಂಡರ್ ಬೆಲೆಯು 25 ರೂಪಾಯಿ ಹೆಚ್ಚಾಗಿತ್ತು. ಆ ಮೂಲಕ 776 ಇದ್ದ ಗ್ಯಾಸ್ ಸಿಲಿಂಡರ್ ಬೆಲೆ 801 ರೂಪಾಯಿಗೆ ಏರಿಕೆಯಾಗಿತ್ತು. ಈ ಮೊದಲು 50 ರೂಪಾಯಿ ಹೆಚ್ಚಾಗಿತ್ತು. ಕಳೆದ 5 ದಿನಗಳಲ್ಲಿ 2 ಬಾರಿ ಗ್ಯಾಸ್ ಸಿಲಿಂಡರ್ ದರವನ್ನು ಏರಿಕೆ ಮಾಡಿದೆ. ಈ ಮೂಲಕ ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬರೆ ಹಾಕಿದೆ.
ಈ ಮಾರಕ ಕೊರೋನಾ ಕೇಕೆ ಹಾಕುತ್ತಿರುವ ಸಂದರ್ಭದಲ್ಲೇ ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿರುವುದು ಜನಸಾಮಾನ್ಯರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಪೆಟ್ರೋಲ್-ಡೀಸೆಲ್ ಬೆಲೆ, ಧಾನ್ಯಗಳ ಬೆಲೆ, ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಹಾಗೂ ಅಡುಗೆ ಎಣ್ಣೆಯ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ಇದು ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸಿದ್ದು, ಜೇಬು ಸುಡುತ್ತಿದೆ.
ಇನ್ನು, ಗ್ಯಾಸ್ ಸಿಲಿಂಡರ್ ದರ ಏರಿಕೆಯಾದ ಹಿನ್ನೆಲೆ, ಆಟೋ ಚಾಲಕರು ತತ್ತರಿಸಿ ಹೋಗಿದ್ದಾರೆ. ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಾಗಿಸುವುದರಿಂದ ಪ್ರಯಾಣ ದರ ಏರಿಕೆ ಮಾಡುವಂತೆ ಆಟೋ ಚಾಲಕರು ಹೇಳುತ್ತಿದ್ದಾರೆ. ಕನಿಷ್ಠ ದರವನ್ನು 36 ರೂ.ಗೆ ಏರಿಸಬೇಕೆಂದು ಆಟೋ ಚಾಲಕರು ಆಗ್ರಹಿಸುತ್ತಿದ್ದಾರೆ.