ಬೆಂಗಳೂರುಗೆ ಹೊಸ ರೂಪ ನೀಡಲು (GBA footpath clearance) ಜಿಬಿಎ ಹೆಜ್ಜೆ: ಅನಾಥ ವಾಹನಗಳು, ಕಟ್ಟಡ ತ್ಯಾಜ್ಯಕ್ಕೆ ಗುಡ್‌ಬೈ
ಸಾರ್ವಜನಿಕ ಸ್ಥಳಗಳನ್ನು ಅಕ್ರಮವಾಗಿ ಆಕ್ರಮಿಸಿರುವ ತ್ಯಾಜ್ಯ ಮತ್ತು ವಾಹನಗಳ ತೆರವಿಗೆ ಅಧಿಕಾರಿಗಳ ಸಿದ್ಧತೆ
ಬೆಂಗಳೂರು ಸ್ವಚ್ಛತೆಗೆ ಜಿಬಿಎ ಬಿಗ್ ಆಕ್ಷನ್: ಸಚಿವ ಕೃಷ್ಣಭೈರೇಗೌಡ ನೇತೃತ್ವದಲ್ಲಿ ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಭೆ
Bengaluru : ನಗರದ ಸ್ವಚ್ಛತೆ ಮತ್ತು ಸೌಂದರ್ಯವನ್ನು ಕಾಪಾಡುವ ನಿಟ್ಟಿನಲ್ಲಿ (GBA footpath clearance) ಬೃಹತ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮತ್ತೊಂದು ಮಹತ್ವದ ಕ್ರಮಕ್ಕೆ ಮುಂದಾಗಿದೆ.
ಈಗಾಗಲೇ ಫುಟ್ಪಾತ್ಗಳ ಮೇಲಿನ ಅತಿಕ್ರಮಣ ತೆರವು ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿರುವ ಜಿಬಿಎ, ಇದೀಗ ರಸ್ತೆಬದಿಗಳಲ್ಲಿ ಅನಧಿಕೃತವಾಗಿ ಬಿದ್ದಿರುವ ಕಟ್ಟಡ ನಿರ್ಮಾಣ ತ್ಯಾಜ್ಯ ಹಾಗೂ ವರ್ಷಗಳಿಂದ ಸಾರ್ವಜನಿಕ ಸ್ಥಳಗಳನ್ನು ಆಕ್ರಮಿಸಿಕೊಂಡಿರುವ ವಾರಸುದಾರರಿಲ್ಲದ ವಾಹನಗಳನ್ನು ತೆರವುಗೊಳಿಸಲು ಬೃಹತ್ ಅಭಿಯಾನ ರೂಪಿಸಿದೆ.

ಈ ವಿಶೇಷ ಕಾರ್ಯಾಚರಣೆ ಇನ್ನೊಂದು ವಾರದೊಳಗೆ ಆರಂಭವಾಗುವ ಸಾಧ್ಯತೆ ಇದ್ದು, ನಗರವನ್ನು ಮತ್ತಷ್ಟು ಸ್ವಚ್ಛ ಮತ್ತು ವ್ಯವಸ್ಥಿತಗೊಳಿಸುವ ಗುರಿಯನ್ನು ಹೊಂದಿದೆ.
ಈ ಕುರಿತು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಭೈರೇಗೌಡ (Krishna Byre Gowda) ಅವರ ನೇತೃತ್ವದಲ್ಲಿ ಹಿರಿಯ (GBA footpath clearance) ಅಧಿಕಾರಿಗಳು ಹಾಗೂ
ನಗರದ ಐದು ಕಾರ್ಪೊರೇಷನ್ಗಳ (Corporation) ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿ ಸಮಗ್ರ ಕಾರ್ಯಯೋಜನೆ ರೂಪಿಸಲಾಗಿದೆ.
ಈ ಕಾರ್ಯಾಚರಣೆಯನ್ನು ಆರಂಭಿಸುವ ಮೊದಲು ಸಾರ್ವಜನಿಕರಿಗೆ ಸೂಕ್ತ ನೋಟಿಸ್ ನೀಡುವುದು, ತೆರವುಗೊಳಿಸಲಿರುವ ಕಟ್ಟಡ ತ್ಯಾಜ್ಯ ಮತ್ತು ಜಪ್ತಿ ಮಾಡಲಿರುವ
ವಾಹನಗಳ ವಿಲೇವಾರಿಗೆ ಪ್ರತ್ಯೇಕ ಸ್ಥಳಗಳನ್ನು ಗುರುತಿಸುವುದು ಹಾಗೂ ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸುವ ಕಾರ್ಯಗಳು ಅಂತಿಮ ಹಂತದಲ್ಲಿವೆ.
ಆರಂಭದಲ್ಲಿ ಶುಕ್ರವಾರದಿಂದಲೇ ಅಭಿಯಾನ ಆರಂಭಿಸುವ ಯೋಜನೆ ಇದ್ದರೂ, ಅಗತ್ಯ ಆಡಳಿತಾತ್ಮಕ ಸಿದ್ಧತೆಗಳು ಪೂರ್ಣಗೊಂಡ ಬಳಿಕ ಅಧಿಕೃತ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿಯಮ ಉಲ್ಲಂಘಿಸಿ ಸಾರ್ವಜನಿಕ ಜಾಗದಲ್ಲಿ ತ್ಯಾಜ್ಯ ಹಾಕುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಜೊತೆಗೆ, ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಶಾಶ್ವತ ನಿಯಂತ್ರಣ ವ್ಯವಸ್ಥೆ ಜಾರಿಗೆ ತರಲು ಜಿಬಿಎ ಯೋಜಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಚಿವ ಕೃಷ್ಣಭೈರೇಗೌಡ, ನಗರದ ಸೌಂದರ್ಯವನ್ನು ಕಾಪಾಡುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ತಿಳಿಸಿದ್ದಾರೆ.
ಒಂದು ಪ್ರದೇಶದಲ್ಲಿ ಕಟ್ಟಡ ತ್ಯಾಜ್ಯ ಬಿದ್ದರೆ ಅದೇ ಸ್ಥಳ ಕ್ರಮೇಣ ಕಸದ ರಾಶಿಯಾಗಿ ಮಾರ್ಪಡುವ ಸಾಧ್ಯತೆ ಹೆಚ್ಚಿರುತ್ತದೆ. ವಿಶೇಷವಾಗಿ ನಗರದ ಹೊರವಲಯಗಳಲ್ಲಿ ಈ ಸಮಸ್ಯೆ ಹೆಚ್ಚು ಗಂಭೀರವಾಗಿದ್ದು, ಸಾರ್ವಜನಿಕ ರಸ್ತೆ, ಖಾಲಿ ಜಾಗ ಮತ್ತು ಫುಟ್ಪಾತ್ಗಳು ಅಸ್ತವ್ಯಸ್ತವಾಗುತ್ತಿವೆ ಎಂದು ಅವರು ಹೇಳಿದ್ದಾರೆ.
ಆದ್ದರಿಂದ ಕೇವಲ ಸ್ವಚ್ಛತಾ ಕಾರ್ಯಾಚರಣೆ ನಡೆಸುವುದಷ್ಟೇ ಅಲ್ಲದೆ, ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸುವ ಮೂಲಕ ನಗರದಲ್ಲಿ ಶಾಶ್ವತ ಸ್ವಚ್ಛತೆ ಕಾಪಾಡಲು ಜಿಬಿಎ ಕ್ರಮ ಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ ನಮ್ಮ ಮೆಟ್ರೋ, ಕೆ-ರೈಡ್ ಹಾಗೂ ರೈಲ್ವೆ ಇಲಾಖೆಗಳಿಗೂ ಜಿಬಿಎ ಕಠಿಣ ಸೂಚನೆ ನೀಡಿದೆ. ವಿವಿಧ ಮೂಲಸೌಕರ್ಯ ಕಾಮಗಾರಿಗಳು ಪೂರ್ಣಗೊಂಡ ಬಳಿಕವೂ ರಸ್ತೆಬದಿ
ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಉಳಿದಿರುವ ಕಬ್ಬಿಣದ ಸಾಮಗ್ರಿಗಳು, ನಿರ್ಮಾಣ ಉಪಕರಣಗಳು ಮತ್ತು ಇತರೆ ವಸ್ತುಗಳನ್ನು ತಕ್ಷಣ ತೆರವುಗೊಳಿಸುವಂತೆ ನಿರ್ದೇಶಿಸಲಾಗಿದೆ.
ಈ ಸಂಬಂಧ ರೈಲ್ವೆ ಇಲಾಖೆಯ ಅಧಿಕಾರಿಗಳೊಂದಿಗೆ ಪ್ರತ್ಯೇಕ ಸಮನ್ವಯ ಸಭೆಯನ್ನೂ ಆಯೋಜಿಸಲಾಗಿದ್ದು, ಎಲ್ಲ ಇಲಾಖೆಗಳು ಒಟ್ಟಾಗಿ ಕಾರ್ಯನಿರ್ವಹಿಸುವ ಮೂಲಕ ಸಾರ್ವಜನಿಕ ಸ್ಥಳಗಳನ್ನು ಸಂಪೂರ್ಣ ಮುಕ್ತಗೊಳಿಸುವ ಗುರಿ ಹೊಂದಲಾಗಿದೆ.
ನಗರಾಭಿವೃದ್ಧಿ ಯೋಜನೆಗಳ ನಂತರ ಸಾರ್ವಜನಿಕರಿಗೆ ಉಂಟಾಗುವ ತೊಂದರೆಗಳನ್ನು ನಿವಾರಿಸುವತ್ತ ಈ ಕ್ರಮ ಮಹತ್ವದ್ದಾಗಿದೆ.
ನಗರದಾದ್ಯಂತ ನಡೆಸಿದ ಸಮೀಕ್ಷೆಯಲ್ಲಿ ಒಟ್ಟು 1,518 ವಾರಸುದಾರರಿಲ್ಲದ ವಾಹನಗಳು ಸಾರ್ವಜನಿಕ ಸ್ಥಳಗಳಲ್ಲಿ ಪತ್ತೆಯಾಗಿವೆ. ಇವುಗಳಲ್ಲಿ ಸೆಂಟ್ರಲ್ ಸಿಟಿ ಕಾರ್ಪೊರೇಷನ್
ವ್ಯಾಪ್ತಿಯಲ್ಲಿ 403, ಪೂರ್ವ ವಲಯದಲ್ಲಿ 92, ಉತ್ತರ ವಲಯದಲ್ಲಿ 209, ದಕ್ಷಿಣ ವಲಯದಲ್ಲಿ 383 ಹಾಗೂ ಪಶ್ಚಿಮ ಕಾರ್ಪೊರೇಷನ್ ವ್ಯಾಪ್ತಿಯಲ್ಲಿ 399 ವಾಹನಗಳಿವೆ.
ಇವುಗಳನ್ನು ಹಂತ ಹಂತವಾಗಿ ಜಪ್ತಿ ಮಾಡಿ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಈ ಅಭಿಯಾನ ಯಶಸ್ವಿಯಾದರೆ ಸಾರ್ವಜನಿಕ ರಸ್ತೆಗಳು,
ಫುಟ್ಪಾತ್ಗಳು ಮತ್ತು ಖಾಲಿ ಜಾಗಗಳು ಮತ್ತಷ್ಟು ಸ್ವಚ್ಛವಾಗಿ ಕಾಣಲಿದ್ದು, ವಾಹನ ಸಂಚಾರ ಸುಗಮವಾಗುವುದರ ಜೊತೆಗೆ ನಗರದ ಸೌಂದರ್ಯವೂ ಹೆಚ್ಚಲಿದೆ ಎಂಬ ನಿರೀಕ್ಷೆ
ವ್ಯಕ್ತವಾಗಿದೆ. ಬೆಂಗಳೂರನ್ನು ಸ್ವಚ್ಛ, ಸುಂದರ ಮತ್ತು ಸುಸಜ್ಜಿತ ನಗರವನ್ನಾಗಿ ರೂಪಿಸುವ ದಿಸೆಯಲ್ಲಿ ಜಿಬಿಎ ಕೈಗೊಂಡಿರುವ ಈ ಕ್ರಮ ಮಹತ್ವದ ಮೈಲಿಗಲ್ಲಾಗಲಿದೆ.
ಇದನ್ನು ಓದಿ : https://vijayatimes.com/protest-by-street-vendors-in-bangalore/