ನವದೆಹಲಿ, ಮಾ. 25: ಕೊರೋನಾ ಸಂಕಷ್ಟದಿಂದ ಪ್ರಪಾತಕ್ಕೆ ಧುಮುಕಿದ್ದ ದೇಶದ ಆರ್ಥಿಕತೆ ಕೆಲ ತಿಂಗಳುಗಳಿಂದ ಚೇತರಿಸಿಕೊಳ್ಳುತ್ತಿದೆ. ಮುಂಬರುವ ಹಣಕಾಸು ವರ್ಷದಲ್ಲಿ ತಾನು ಅಂದಾಜಿಸಿದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಜಿಡಿಪಿ ಬೆಳವಣಿಗೆ ಹೊಂದಲಿದೆ ಎಂದು ಫಿಚ್ ಸಂಸ್ಥೆ ಹೇಳಿದೆ. ಏಪ್ರಿಲ್ 1ರಿಂದ ಪ್ರಾರಂಭವಾಗುವ 2021-22ರ ಸಾಲಿನ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಶೇ. 12.8 ರಷ್ಟು ಅಭಿವೃದ್ಧಿ ಹೊಂದಬಹುದು ಎಂದು ಫಿಚ್ ಸಂಸ್ಥೆಯ ಗ್ಲೋಬಲ್ ಎಕನಾಮಿಕ್ ಔಟ್ಲುಕ್ ವರದಿಯಲ್ಲಿ ಅಂದಾಜು ಮಾಡಿದೆ. ಈ ಮುಂಚೆ ಅದು ಇದೇ ಅವಧಿಯಲ್ಲಿ ಶೇ. 11ರ ದರದಲ್ಲಿ ಜಿಡಿಪಿ ಬೆಳವಣಿಗೆಯಾಗಬಹುದು ಎಂದು ಹೇಳಿತ್ತು. ಇದೀಗ ಭಾರತದಲ್ಲಿ ಆರ್ಥಿಕತೆ ನಿರೀಕ್ಷೆಮೀರಿ ಚೇತರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಫಿಚ್ ತನ್ನ ಅಂದಾಜನ್ನು ಪರಿಷ್ಕರಿಸಿದೆ.
ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾಗಿ ವಿವಿಧ ರಾಜ್ಯಗಳಲ್ಲಿ ನಿರ್ಬಂಧಗಳನ್ನ ಹಂತ ಹಂತವಾಗಿ ಸಡಿಲಿಸಿದ ಪರಿಣಾಮ 2020ರ ವರ್ಷಾಂತ್ಯದಲ್ಲಿ ಆರ್ಥಿಕತೆ ಬಹಳ ವೇಗವಾಗಿ ಬೆಳೆದಿದೆ. ಆದರೆ ಇತ್ತೀಚೆಗೆ ಹೊಸ ಕೋವಿಡ್ ಪ್ರಕರಣಗಳು ಬಹಳ ಏರಿಕೆ ಕಾಣುತ್ತಿರುವುದರಿಂದ 2021ರಲ್ಲಿ ಆರ್ಥಿಕ ಬೆಳವಣಿಗೆಯ ವೇಗ ತುಸು ನಿಧಾನಗೊಳ್ಳುವ ಸಾಧ್ಯತೆ ನಮಗೆ ತೋರಿದೆ ಎಂದು ಫಿಚ್ ವರದಿ ಹೇಳಿದೆ.
2021ರ ವರ್ಷದ ಮೊದಲಾರ್ಧದ ಅವಧಿಯಲ್ಲಿ ಭಾರತದ ಕೈಗಾರಿಕಾ ಉತ್ಪನ್ನ ಶಕ್ತಿಗೆ ಜಾಗತಕ ಆಟೋ ಚಿಪ್ ಕೊರತೆ ಕಾಡುವ ಸಾಧ್ಯತೆ ಇದೆ. ಹಣಕಾಸು ವಲಯದ ದೌರ್ಬಲ್ಯದಿಂದಾಗಿ ದೇಶದಲ್ಲಿ ಹಣದ ಹರಿವನ್ನು ಕಡಿಮೆಗೊಳಿಸಬಹುದು ಎಂದಿರುವ ಫಿಚ್ ಸಂಸ್ಥೆ, ಕೋವಿಡ್ಗೆ ಮುಂಚೆ ಇದ್ದ ಜಿಡಿಪಿ ಬೆಳವಣಿಗೆ ದರಕ್ಕೆ ಹೋಲಿಸಿದರೆ 2023ರ ಕ್ಯಾಲೆಂಡರ್ ವರ್ಷದಲ್ಲಿ ಜಿಡಿಪಿ ಶೇ. 5.8ರ ಬೆಳವಣಿಗೆಗೆ ಬಂದು ನಿಲ್ಲಬಹುದು. ಇದು ನಮ್ಮ ಆಗಿನ ಅಂದಾಜಿಗಿಂತ ತುಸು ಕಡಿಮೆ ಆಗಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.