ವಾಷಿಂಗ್ಟನ್ ಡಿ 3: ಮೈಸೂರಿನ ಗೀತಾ ಗೋಪಿನಾಥ್ ಅವರಿಗೆ ಪ್ರತಿಷ್ಠಿತ ಸಂಸ್ಥೆಯಾಗಿರುವ ಐಎಂಎಫ್ ಉನ್ನತ ಸ್ಥಾನವನ್ನು ನೀಡಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಮುಖ್ಯ ಅರ್ಥಶಾಸ್ತ್ರಜ್ಞೆಯಾಗಿರುವ ಮೈಸೂರು ಮೂಲದ ಗೀತಾ ಗೋಪಿನಾಥ್ ಅವರು ಐಎಂಎಫ್‌ನ ಪ್ರಥಮ ಉಪ ವ್ಯವಸ್ಥಾಪಕ ನಿರ್ದೇಶಕಿಯಾಗಿ ಬಡ್ತಿ ಪಡೆದುಕೊಂಡಿದ್ದಾರೆ.
ಜೆಫ್ರಿ ಒಕಾಮೊಟೊ ಅವರು ತೊರೆಯಲಿರುವ ಪ್ರಥಮ ಉಪ ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ಗೀತಾ ಗೋಪಿನಾಥನ್ ಅವರ ನೇಮಕವಾಗಿದೆ. ಈಗಾಗಲೇ ಮೂರು ವರ್ಷ ಐಎಂಎಫ್‌ನ ಮುಖ್ಯ ಅರ್ಥಶಾಸ್ತ್ರಜ್ಞರಾಗಿ ಸೇವೆ ಸಲ್ಲಿಸಿರುವ ಗೀತಾ ಗೋಪಿನಾಥನ್ ಮುಂದಿನ ವರ್ಷದ ಆರಂಭದಲ್ಲಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಇತಿಹಾಸದಲ್ಲಿ ಮೊದಲ ಮಹಿಳಾ ಮುಖ್ಯ ಅರ್ಥಶಾಸ್ತ್ರಜ್ಞರಾಗಿರುವ ಗೀತಾ ಗೋಪಿನಾಥ್ ಅವರು ಐಎಂಎಫ್‌ನ ಸದಸ್ಯ ರಾಷ್ಟ್ರಗಳಿಂದ ಮೆಚ್ಚುಗೆಯನ್ನು ಗಳಿಸಿದ್ದಾರೆ ಮತ್ತು ಕಠಿಣವಾದ ಕೆಲಸವನ್ನು ಮುನ್ನಡೆಸಿ, ಯಶಸ್ವಿಗೊಳಿಸುವ ಸಾಮರ್ಥ್ಯ ಅವರಲ್ಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿಯ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜಿವಾ ಅವರು ಹೇಳಿದ್ದಾರೆ.
ಈ ಪ್ರತಿಕ್ರಿಯೆ ನೀಡಿರುವ ಗೀತಾ ಗೋಪಿನಾಥ್, ‘ನನಗೆ ಹೊಸ ಅವಕಾಶ ನೀಡಿದ್ದಕ್ಕಾಗಿ ಕ್ರಿಸ್ಟಲಿನಾ ಜಾರ್ಜಿವಾ ಮತ್ತು ಮಂಡಳಿಗೆ ಕೃತಜ್ಞಳಾಗಿರುತ್ತೇನೆ. ಅಂತಾರಾಷ್ಟ್ರೀಯ ಹಣಕಾಸು ನಿಧಿಯಲ್ಲಿ ಅತ್ಯಂತ ಪ್ರತಿಭಾವಂತ ಸಹೋದ್ಯೋಗಿಗಳಿದ್ದಾರೆ. ಅವರೊಂದಿಗೆ ಕೆಲಸ ಮಾಡುವುದು ನನಗೆ ಸಿಕ್ಕ ಒಳ್ಳೆಯ ಅವಕಾಶ’ ಎಂದಿದ್ದಾರೆ.