ಬೆಂಗಳೂರು, ಡಿ. 29: ಸ್ಯಾಂಡಲ್ವುಡ್ ನಟ ರಮೇಶ್ ಅರವಿಂದ್ ಹಾಗೂ ಅರ್ಚನ ದಂಪತಿ ಪುತ್ರಿ ನಿಹಾರಿಕ ಅವರು ಗೆಳೆಯ ಅಕ್ಷಯ್ ಅವರೊಂದಿಗೆ ಸಪ್ತಪದಿ ತುಳಿದರು.
ಬನ್ನೇರುಘಟ್ಟ ರಸ್ತೆಯಲ್ಲಿರುವ ರೆಸಾರ್ಟ್ ನಲ್ಲಿ ಸೋಮವಾರ ನಡೆದ ವಿವಾಹ ಮಹೋತ್ಸವದಲ್ಲಿ ಅಕ್ಷಯ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕೊರೊನಾ ಹಿನ್ನೆಲೆಯಲ್ಲಿ ಮದುವೆಗೆ ಕೆಲವೇ ಆಪ್ತರಿಗೆ ಆಹ್ವಾನ ನೀಡಲಾಗಿತ್ತು.
ನಿಹಾರಿಕ ಹಾಗೂ ಅಕ್ಷಯ್ ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಎರಡೂ ಕುಟುಂಬದವರ ಸಮ್ಮುಖದಲ್ಲಿ ಮದುವೆ ಸಮಾರಂಭ ನೆರವೇರಿತು. ನಿಹಾರಿಕ ಹಾಗೂ ಅಕ್ಷಯ್ ಅವರ ಆರತಕ್ಷತೆ 2021ರ ಜನವರಿ 16ರಂದು ನಡೆಯಲಿದ್ದು, ಅಂದು ಚಿತ್ರರಂಗ ಸೇರಿದಂತೆ ಹಲವು ಕ್ಷೇತ್ರದ ಪ್ರಮುಖರಿಗೆ ಆಹ್ವಾನ ನೀಡಲಾಗುತ್ತದೆ ಎಂದು ತಿಳಿದು ಬಂದಿದೆ. ತಮ್ಮ ಮಗಳ ಮದುವೆ ಸಮಾರಂಭದ ಫೋಟೋಗಳನ್ನು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ನಟ ರಮೇಶ್ ಅರವಿಂದ್, ನಿಮ್ಮ ಪ್ರೀತಿ, ಆಶಿರ್ವಾದ ನವ ಜೋಡಿಯ ಮೇಲಿರಲಿ ಎಂದು ವಿನಂತಿಸಿದ್ದಾರೆ.