ಈ ಮರದ ಹೆಸರು ಜನರಲ್ ಶೆರ್ಮನ್(General Sherman). ಇದು ಸುಮಾರು 2000 ವರ್ಷಗಳಷ್ಟು ಹಳೆಯದಾಗಿದ್ದು, ಇದು ಭೂಮಿಯ ಮೇಲಿರುವ ವಿಶ್ವದ ಅತಿ ದೊಡ್ಡ ಮರ ಎನ್ನುವ ಖ್ಯಾತಿಗೆ ಪಾತ್ರವಾಗಿದೆ.

83.8 ಮೀ (274.9 ಅಡಿ) ಎತ್ತರಕ್ಕೆ ಬೆಳೆದು ನಿಂತಿರುವ ಇದನ್ನು ಕ್ಯಾಲಿಫೋರ್ನಿಯಗೆ ಹೋದಾಗ ನೋಡಬಹುದು. ಈ ಮರವನ್ನು “ಭೂಮಿಯ ಮೇಲಿನ ಅತಿದೊಡ್ಡ ಜೀವರಾಶಿ” ಎಂದೂ ಕರೆಯಲಾಗುತ್ತದೆ. ಯುಎಸ್‌ನ(US) ಕ್ಯಾಲಿಫೋರ್ನಿಯಾದ(California) ತುಲೇರ್ ಕೌಂಟಿಯಲ್ಲಿ “ಜೈಂಟ್ ಫಾರೆಸ್ಟ್ ಆಫ್ ಸಿಕೋಯಾ”(Giant Forest Of California) ರಾಷ್ಟ್ರೀಯ ಉದ್ಯಾನವನದಲ್ಲಿ ಬೆಳೆದು ನಿಂತಿರುವ ದೊಡ್ಡ ಹೆಮ್ಮರವೇ ಜನರಲ್ ಶೆರ್ಮನ್. ಈ ದೈತ್ಯ ಸಿಕ್ವೊಯಾ (ಸಿಕ್ವೊಯಾಡೆಂಡ್ರಾನ್ ಗಿಗಾಂಟಿಯಮ್) ಮರವು 25 ಅಡಿಯಷ್ಟು ಕಾಂಡವನ್ನು ಹೊಂದಿದೆ.
ರೆಂಬೆಯು ಕೇವಲ 40 ಮೀ ಅಥವಾ 130 ಅಡಿಗಳಿಂದ ಪ್ರಾರಂಭವಾಗುತ್ತದೆ. ಈ ಮರವು 2000 ರಿಂದ 3000 ವರ್ಷಗಳಷ್ಟು ಹಳೆಯದ್ದು ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ಮರಕ್ಕೆ 6000 ರಿಂದ 11000 ವರ್ಷ ವಯಸ್ಸಾಗಿದೆ ಎಂದು ಹೇಳುತ್ತಾರೆ. ಆದರೆ 2002ರ ಸಂಶೋಧನೆಯ ಪ್ರಕಾರ ಇದಕ್ಕೆ ಸುಮಾರು 2000 ವರ್ಷ ವಯಸ್ಸು ಎಂದು ಪ್ರಕಟಿಸಲಾಗಿದೆ. ಜನರಲ್ ಶೆರ್ಮನ್ ಅತಿದೊಡ್ಡ ದೈತ್ಯ ರೆಡ್‌ವುಡ್. ಇದು ಭೂಮಿಯ ಮೇಲಿನ ಅತಿದೊಡ್ಡ ಜೀವಿ ಎಂದು ಕರೆಯಲಾಗುತ್ತದೆ. ಇನ್ನೊಂದು ಮುಖ್ಯ ವಿಚಾರವೆಂದರೆ ಇದುವರೆಗೂ ಜನರಲ್ ಶೆರ್ಮನ್‌ಗಿಂತ ದೊಡ್ಡದಾದ ಕಾಂಡದ ಪ್ರಮಾಣವನ್ನು ಹೊಂದಿರುವ ಒಂದೇ ಒಂದು ಮರವು ಕಂಡುಬಂದಿಲ್ಲ.

2006 ರಲ್ಲಿ ಚಳಿಗಾಲದ ಸಂದರ್ಭದಲ್ಲಿ ಚಂಡಮಾರುತ ಎದುರಾದಾಗ ಜನರಲ್ ಶೆರ್ಮನ್ ಮರದ ದೊಡ್ಡ ಕೊಂಬೆ ಮುರಿದುಬಿತ್ತು. ರೆಂಬೆ ಬಿದ್ದ ಮಾತ್ರಕ್ಕೆ ಇದು ಅತಿದೊಡ್ಡ ಮರ ಎನ್ನುವುದು ಬದಲಾಗುವುದಿಲ್ಲ. ಏಕೆಂದರೆ ರೆಂಬೆಗಳನ್ನು ಹೊರತುಪಡಿಸಿ, ಕಾಂಡದ ಪ್ರಮಾಣದ ಅಳತೆಗಳ ಆಧಾರದ ಮೇಲೆ ಇದಕ್ಕೆ ದೈತ್ಯ ಮರ ಎಂಬ ಗೌರವ ನೀಡಲಾಗುತ್ತದೆ. ಜನರಲ್ ಶೆರ್ಮನ್ ಮರದ ಸಮೀಪ ಅನೇಕ ಪ್ರವಾಸಿ ಸ್ಥಳಗಳಿವೆ. ನೀವು ಇಲ್ಲಿಗೆ ಭೇಟಿ ನೀಡಿದಾಗ ಅವುಗಳನ್ನು ನೋಡಿಕೊಂಡು ಬರಬಹುದು.
ವಿಶ್ರಾಂತಿ ಬಯಸುವವರು ಹೊರಾಂಗಣದಲ್ಲಿರುವ ಕ್ರಿಸ್ಟಲ್ ಕೇವ್, ಹಾಸ್ಪಿಟಲ್ ರಾಕ್ ಬಳಿ ಕಾಲ ಕಳೆಯಬಹುದು. ಪ್ರಕೃತಿ ಪ್ರಿಯರು ಮೊರೊ ರಾಕ್, ಟೊಕೊಪಾ ಫಾಲ್ಸ್ ಮತ್ತು ಟನಲ್ ಲಾಗ್‌ನಲ್ಲಿ ಕುಟುಂಬದವರ ಜೊತೆ ಸ್ವಲ್ಪ ಸಮಯ ಕಾಲಕಳೆಯಬಹುದು. ನಂತರ ಕಾಂಗ್ರೆಸ್ ಟ್ರಯಲ್ ಗೆ ತೆರಳುವಾಗ ದೊಡ್ಡ ಮರಗಳ ನಡುವೆ ಸಾಗುತ್ತಾ ಭೇಟಿ ನೀಡುವಂತೆ ಪ್ರವಾಸವನ್ನು ಆಯೋಜಿಸಬಹುದು.
- ಪವಿತ್ರ ಸಚಿನ್