ಜಿನಿವಾ, ಮಾ. 16: ಕೋವಿಡ್-19 ನಿಯಂತ್ರಣದ ಸಲುವಾಗಿ ಅಸ್ಟ್ರಾಜೆನೆಕಾ -ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಸಹಯೋಗದಲ್ಲಿ ಅಭಿವೃದ್ಧಿಪಡಿಸಿರುವ ಅಸ್ಟ್ರಾಜೆನೆಕಾ ಲಸಿಕೆ ಬಳಕೆಗೆ ಜರ್ಮನಿ, ಇಟಲಿ ಮತ್ತು ಫ್ರಾನ್ಸ್ ದೇಶಗಳು ತಡೆ ನೀಡಿವೆ.
ರಕ್ತ ಹೆಪ್ಪುಗಟ್ಟುವ ಭೀತಿಯ ಹಿನ್ನೆಲೆಯಲ್ಲಿ ಯುರೋಪ್ನ ಅತಿ ದೊಡ್ಡ ರಾಷ್ಟ್ರಗಳಾದ ಜರ್ಮನಿ, ಇಟಲಿ ಮತ್ತು ಫ್ರಾನ್ಸ್ ದೇಶಗಳು ಸೋಮವಾರದಿಂದ ಆಸ್ಟ್ರಾಜೆನೆಕಾ ಲಸಿಕೆ ಬಳಕೆಯನ್ನು ಸ್ಥಗಿತಗೊಳಿಸಿವೆ. ಈ ನಡುವೆ ವಿಶ್ವ ಆರೋಗ್ಯ ಸಂಸ್ಥೆ ಆಸ್ಟ್ರಾಜೆನೆಕಾ ಲಸಿಕೆ ಸುರಕ್ಷಿತ ಎಂದು ಹೇಳಿದೆ.
ಈ ವಾರದಲ್ಲಿ ಅಸ್ಟ್ರಾಜೆನೆಕಾ ಮತ್ತು ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ತಜ್ಞರು ಸಭೆ ನಡೆಸಿ ಮತ್ತೆ ಲಸಿಕೆಯ ದತ್ತಾಂಶಗಳ ಬಗ್ಗೆ ಪರಾಮರ್ಶೆ ನಡೆಸಲಿದ್ದಾರೆ ಎಂದು ಅಸ್ಟ್ರಾಜೆನೆಕಾ ಕಂಪನಿಯ ವಕ್ತಾರರು ತಿಳಿಸಿದ್ದಾರೆ. ಈಗಾಗಲೇ ಸ್ಪೇನ್, ಪೋರ್ಚುಗಲ್, ಸ್ಲೊವೇನಿಯಾ ಮತ್ತು ಲಾಟ್ವಿಯಾ ದೇಶಗಳು ಅಸ್ಟ್ರಾಜೆನೆಕಾ ಲಸಿಕೆ ನೀಡುವುದನ್ನು ನಿಲ್ಲಿಸಿವೆ.
ಜನರು ಗಾಬರಿಪಡುವ ಅಗತ್ಯವಿಲ್ಲ, ಲಸಿಕೆ ಕೆಲವರಲ್ಲಿ ಮಾತ್ರ ಅಡ್ಡಪರಿಣಾಮ ಬೀರಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಲಸಿಕೆ ತಜ್ಞೆ ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ.
ಅಸ್ಟ್ರಾಜೆನೆಕಾ ಲಸಿಕೆ ಪಡೆದ ಕೆಲವರಲ್ಲಿ ರಕ್ತಹೆಪ್ಪುಗಟ್ಟುವುದು ಸೇರಿದಂತೆ, ಜ್ವರ, ಎದೆ ನೋವು ಕಾಣಿಸಿಕೊಂಡಿರುವ ಬಗ್ಗೆ ವರದಿಯಾಗಿದೆ.