ಚಾಮರಾಜನಗರ, ಫೆ. 11: ಪ್ರೇಮಿಗಳ ದಿನ(ವ್ಯಾಲೆಂಟೈನ್ಸ್ ಡೇ) ಬಂದ್ರೆ ಕಾಲೇಜು ವಿದ್ಯಾರ್ಥಿಗಳು, ಹದಿಹರೆಯದ ಯುವಕ ಯುವತಿಯರಲ್ಲಿ ಎಲ್ಲಿಲ್ಲದ ಹರ್ಷ. ಆದರೆ ವ್ಯಾಲೆಂಟೈನ್ಸ್ ಡೇ ಹಿನ್ನೆಲೆ ಹುಡುಗಿಯರ ಕಾಟ ತಾಳಲಾರದೆ ಕಾಲೇಜು ವಿದ್ಯಾರ್ಥಿಯೋರ್ವ ರಜೆ ಕೋರಿ ಬರೆದಿರುವ ಲೀವ್ ಲೆಟರ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದ ಮಹದೇಶ್ವರ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಶಿವರಾಜು ಎಸ್ ಎಂಬ ವಿದ್ಯಾರ್ಥಿ ಹೆಸರಲ್ಲಿ ಈ ಅರ್ಜಿ ಇದ್ದು, ಪ್ರೇಮಿಗಳ ದಿನ ಹತ್ತಿರ ಬರುತ್ತಿದ್ದು ನನಗೆ ಹುಡುಗಿಯರ ಕಾಟ ತಡೆಯಲು ಆಗುತ್ತಿಲ್ಲ, ಹಾಗಾಗಿ 5 ದಿನ ರಜೆ ಬೇಕೆಂದು ಕಳೆದ 9 ರಂದು ಈ ಅರ್ಜಿ ಬರೆಯಲಾಗಿದೆ. ವೈರಲ್ ಆಗಿರುವ ಅರ್ಜಿಲ್ಲಿ ಪ್ರಾಂಶುಪಾಲ ಸೀಗ ನಾಯಕ ಅವರ ಸಹಿ ಮತ್ತು ಮೊಹರೂ ಇದೆ.
ಆದರೆ, ಈ ಬಗ್ಗೆ ಪ್ರಾಂಶುಪಾಲ ಸೀಗನಾಯಕ ಪ್ರತಿಕ್ರಿಯಿಸಿದ್ದು, ತನ್ನ ಸಹಿಯನ್ನು ಯಾರೋ ನಕಲಿ ಮಾಡಿ, ಕದ್ದು ಮೊಹರನ್ನು ಹಾಕಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ವಿದ್ಯಾರ್ಥಿ ಪ್ರೇಮಿಗಳ ದಿನಕ್ಕಾಗಿ ರಜೆ ಕೋರಿರುವುದು ಪ್ರಚಾರದ ತೆವಲಿಗಾಗಿ ಅಷ್ಟೆ ಎಂದು ಅನೇಕರು ಫೇಸ್ ಬುಕ್ ನಲ್ಲಿ ಪ್ರತಿಕ್ರಿಯಿಸಿದ್ದು ಕೆಲವರಿಗೆ ಹಾಸ್ಯ ಎನಿಸಿದೆ. ಅನೇಕರು ಇದು ಸುಳ್ಳು ಕಾರಣ ಎಂದು ಪ್ರತಿಕ್ರಿಯಿಸಿದ್ದಾರೆ. ಪ್ರಾಂಶುಪಾಲರ ಸಹಿಯ್ನೂ ನಕಲು ಮಾಡಿ ಸಾಮಾಜಿಕ ತಾಣಗಳಲ್ಲಿ ಹರಡಿರುವುದನ್ನು ಗಮನಿಸಿದರೆ ಇದು ಕೇವಲ ಪ್ರಚಾರದ ಸ್ಟಂಟ್ ಎಂದು ಎಂದು ಬಹಳಷ್ಟು ಜನ ಪ್ರತಿಕ್ರಿಯೆ ನೀಡಿದ್ದಾರೆ.