ಇದು ಬೀದರ್ ಜಿಲ್ಲೆಯ ಔರಾದ್‌ನಲ್ಲಿ ರೈತರು ನಡೆಸಿದ ಪ್ರತಿಭಟನೆ. ಕೊರೋನಾ ಸಂಕಷ್ಟ ಕಾಲದಲ್ಲಿ ರೈತರು ಊಟ ಇಲ್ಲದೇ ಕಷ್ಟ ಪಡುತ್ತಿರುವುದು ಒಂದು ಕಡೆಯಾದರೆ, ಇನ್ನೊಂದು ಕಡೆ ಬಿತ್ತನೆ ಬೀಜದ ಸಮಸ್ಯೆ.
ಗಡಿನಾಡು ಬೀದರ್ ಜಿಲ್ಲೆಯಲ್ಲಿ ರೈತರು ಬಿತ್ತನೆ ಬೀಜ ಸಿಗದೆ ಭಾರೀ ಸಂಕಷ್ಟ ಎದುರಿಸುತ್ತಿದ್ದಾರೆ. ಕೊರೋನಾದ ಈ ಸಂದರ್ಭದಲ್ಲಿ ತುತ್ತು ಅನ್ನಕ್ಕೂ ಅನೇಕರು ಕಷ್ಟಪಡುತ್ತಿದ್ದಾರೆ. ಈ ಸಂದರ್ಭದಲ್ಲಿ ಸರ್ಕಾರ ರೈತರಿಗೆ ಬೇಕಾದ ಸಮರ್ಪಕ ಬಿತ್ತನೆ ಬೀಜಗಳನ್ನು ನೀಡದೇ ಸತಾಯಿಸುತ್ತಿದೆ ಅನ್ನೋದು ರೈತರ ಆರೋಪ.
ಮಹಿಳೆಯರು ಮುದುಕರು, ಈ ಲಾಕ್ಡೌನ್ ಸಂದರ್ಭದಲ್ಲೂ ರೈತ ಸಂಪರ್ಕ ಕೇಂದ್ರದ ಮುಂದೆ ಎಂಟು ಒಂಭತ್ತು ದಿನಗಳಿಂದ ಬೀಡು ಬಿಟ್ಟಿದ್ದಾರೆ. ರಾತ್ರಿ ಹಗಲು ಇಲ್ಲೇ ಕಳೆಯುತ್ತಿದ್ದಾರೆ.
ಮುಂಗಾರು ಆರಂಭಗೊಂಡರೂ, ಸರಿಯಾದ ರೀತಿಯಲ್ಲಿ ಬಿತ್ತನೆ ಬೀಜ ಸಿಗುತ್ತಿಲ್ಲ. ಇದೇ ರೀತಿ ಮುಂದುವರೆದರೆ ಅತಿವೃಷ್ಟಿ ಉಂಟಾಗಿ, ಸರಿಯಾಗಿ ಬಿತ್ತನೆ ಮಾಡಲಾಗದೇ, ಕೊಚ್ಚಿ ಹೋಗುವ ಭೀತಿಯೂ ಇದೆ ಅಂತಾರೆ ರೈತರು.
ಆದ್ದರಿಂದ ಸೂಕ್ತ ಸಂದರ್ಭದಲ್ಲಿ ಸಮರ್ಪಕವಾಗಿ ಬಿತ್ತನೆ ಬೀಜವನ್ನು ಪೂರೈಸಿ ಇಲ್ಲವೇ ನಮಗೆ ವಿಷ ಕೊಡಿ ಅಂತ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಬಿತ್ತನೆ ಬೀಜವನ್ನು ವಿತರಿಸುವ ಹೊಣೆ ಹೊತ್ತಿರುವ ಕೃಷಿ ಅಧಿಕಾರಗಳು ರೈತ ಸಂಪರ್ಕ ಕಚೇರಿ ಕಡೆ ತಲೆನೇ ಹಾಕುತ್ತಿಲ್ಲ. ಕಚೇರಿ ಎದುರು ಧರಣಿ ಮಾಡಿದ್ರು ಸ್ಪಂದಿಸುತ್ತಿಲ್ಲ. ನಮಗೆ ಬಿತ್ತನೆ ಬೀಜಗಳನ್ನು ನೀಡುವವರೆಗೆ ಕಚೇರಿಯ ಎದುರು ಕಾಯುತ್ತೇವೆ ಎನ್ನುತ್ತಾರೆ ಇಲ್ಲಿನ ರೈತರು.
ಸೋಯಾ ಬೀಜಕ್ಕಾಗಿ ರಾತ್ರಿ ಹಗಲು ರೈತ ಸಂಪರ್ಕ ಕೇಂದ್ರದ ಮುಂದೆ ಕಾಯುವ ಪರಿಸ್ಥಿತಿ ಎದುರಾಗಿದೆ. ಸರ್ಕಾರವು ಈ ಸಮಸ್ಯೆಯತ್ತ ಗಮನಹರಿಸಲಿಲ್ಲ. ಈ ಹಿಂದೆ ಯಡಿಯೂರಪ್ಪನವರ ಸರ್ಕಾರವಿದ್ದಾಗ ಹಾವೇರಿಯಲ್ಲಿ ಬಿತ್ತನೆ ಬೀಜಕ್ಕಾಗಿ ರೈತರು ನಡೆಸಿದ ಪ್ರತಿಭಟನೆಯಲ್ಲಿ ಗೋಲಿಬಾರ್ ಆಗಿತ್ತು. ಆದ್ರೆ ಸರ್ಕಾರ ಈಗಲೂ ಅದರಿಂದ ಬುದ್ಧಿ ಕಲಿತಿಲ್ಲ ರೈತರ ಸಮಸ್ಯೆ ಪರಿಹರಿಸುತ್ತಿಲ್ಲ.
ಬೀದರ್‌ನ ಔರಾದ್ ಶಾಸಕ ಪ್ರಭು ಚೌಹಾಣ್ ಅವರು ಸಚಿವರೂ ಆಗಿದ್ದಾರೆ. ಆದ್ರೆ ಅವರು ಜಿಲ್ಲೆಯ ರೈತರ ಸಮಸ್ಯೆಗಳತ್ತ ಗಮನವೇ ಹರಿಸುತ್ತಿಲ್ಲ. ಅಂಥಾ ಶಾಸಕರು ನಮಗೆ ಬೇಡವೇ ಬೇಡ ಅಂತಾರೆ ರೈತರು.
ಪದೇ ಪದೇ ರೈತರಿಗೆ ಸಮಸ್ಯೆಯಾಗುತ್ತಿದ್ದರೂ ಅವರತ್ತ ಯಾವ ಅಧಿಕಾರಿಗಳೂ, ಯಾವ ಶಾಸಕರು ಗಮನ ಹರಿಸುತ್ತಿಲ್ಲ. ರೈತರ ಸಮಸ್ಯೆಗಳನ್ನು ಕೇಳುವ ವ್ಯವಧಾನವಿಲ್ಲ ಆದರೆ ರೈತರು ಬೆಳೆದ ಅಕ್ಕಿ ಬೇಳೆ ಅವಶ್ಯಕತೆ ಇದೆ. ಸ್ವಾಭಿಮಾನವೆನ್ನುವುದಿದ್ದರೆ ಬಿತ್ತನೆ ಬೀಜಗಳನ್ನು ಸಮರ್ಪಕವಾಗಿ ನೀಡಿ.
ರೈತರ ಸಮಸ್ಯೆಗಳನ್ನು ಪರಿಹರಿಸಿ ಮುಂದೆ ರಾಜ್ಯಕ್ಕೆ ಎದುರಾಗಬಹುದಾದ ಭಾರೀ ಸಂಕಷ್ಟವನ್ನು ತಪ್ಪಿಸುವತ್ತ ಗಮನ ಹರಿಸಬೇಕಾದ ಸರ್ಕಾರ ರಾಜಕೀಯ ದೊಂಬರಾಟದಲ್ಲಿ ತೊಡಗಿದೆ. ಇದು ನಿಜವಾಗ್ಲೂ ನಾಚಿಕೆಗೇಡಿನ ವಿಚಾರ. ಈಗಲಾದ್ರು ಸರ್ಕಾರ ಎಚ್ಚೆತ್ತುಕೊಳ್ಳಲಿ, ರೈತರಿಗೆ ಬಿತ್ತನೆ ಬೀಜ ನೀಡಲಿ.
ಬೀದರ್‌ನಿಂದ ಸಿಟಿಜನ್ ಜರ್ನಲಿಸ್ಟ್ ಪವನ್