ಪಣಜಿ ಜ 19 : ಗೋವಾದಲ್ಲಿ ರಾಜಕೀಯ ಚಟುವಟಿಕೆ ಜೋರಾಗಿದ್ದು ಮುಂಬರುವ ವಿಧಾನ ಸಭಾ ಚುನಾವಣೆಗೆ AAP ತನ್ನ ಅಭ್ಯರ್ಥಿಗಳನ್ನು ಘೋಷಣೆಮಾಡಿದೆ. ಮುಂದಿನ ತಿಂಗಳು ನಡೆಯುವ ಗೋವಾ ಚುನಾವಣೆ ನಿಮಿತ್ತ ಇಂದು ಎಎಪಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿದೆ. ವರ್ಚುವಲ್ ಸಭೆಯಲ್ಲಿ ಈ ಕುರಿತು ಎಎಪಿ ಮುಖ್ಯಸ್ಥ ಹಾಗೂ ದೆಹಲಿ ಮುಖ್ಯಂತ್ರಿ ಅರವಿಂದ್ ಕೇಜ್ರಿವಾಲ್ ಭಂಡಾರಿ ಸಮುದಾಯದ ಅಮಿತ್ ಪಾಲೇಕರ್‌ರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿದ್ದಾರೆ.
ವರ್ಚುವಲ್ ಸಭೆಯಲ್ಲಿ ಮಾತನಾಡಿದ ಕೇಜ್ರಿವಾಲ್ ಬೇರೆ ಪಕ್ಷಗಳಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಕುರಿತಾಗಿ ಯಾವುದೇ ಆಯ್ಕೆಗಳಿಲ್ಲ. ಆದರೆ, ಎಎಪಿ ಮುಂಚಿತವಾಗಿಯೇ ಘೋಷಿಸುತ್ತಿದ್ದೆ ಮತ್ತು ಜನರು ಬದಲಾವಣೆಯನ್ನು ಬಯಸುತ್ತಿದ್ದಾರೆ ಎಂದು ಹೇಳಿದ್ದಾರೆ. ಮುಂದುವರೆದು, ಸ್ಥಳೀಯವಾಗಿ ಈ ಸಮುದಾಯ ಹೆಚ್ಚಾಗಿ ಇರುವ ಕಾರಣ ಮತ್ತು ರಾಜಕೀಯದಲ್ಲಿ ಅಷ್ಟಾಗಿ ಪ್ರಾತಿನಿತ್ಯ ಪಡೆಯದ ಕಾರಣ ಈ ಸಮುದಾಯದ ನಾಯಕನನ್ನು ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ ಎಂದು ಹೇಳಿದ್ದಾರೆ.
ಶನಿವಾರ ಮತ್ತು ಭಾನುವಾರ ಅರವಿಂದ ಕೇಜ್ರಿವಾಲ್ ಗೋವಾ ರಾಜ್ಯದ ಪ್ರವಾಸ ಕೈಗೊಂಡಿದ್ದರು. ಅಭ್ಯರ್ಥಿಗಳು ಘೋಷಣೆಯಾದ ಕ್ಷೇತ್ರದಲ್ಲಿ ಮನೆ-ಮನೆ ಪ್ರಚಾರವನ್ನು ನಡೆಸಿದ್ದರು. ಪತ್ರಿಕಾಗೋಷ್ಠಿ ನಡೆಸಿ ಗೋವಾದ ಅಭಿವೃದ್ಧಿಗಾಗಿ 13 ಅಂಶಗಳ ಕಾರ್ಯಕ್ರಮ ಘೋಷಣೆ ಮಾಡಿದ್ದರು.
ಆಮ್ ಆದ್ಮಿ ಪಕ್ಷ ಮೊದಲ ಬಾರಿಗೆ ಗೋವಾ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದೆ. ಈಗಾಗಲೇ ಪಕ್ಷ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಯಾವುದೇ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳದೇ ರಾಜ್ಯದ 40 ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದೆ.
ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಯಾವುದೇ ಪಕ್ಷಗಳು ಸಹ ಇನ್ನೂ ಸಹ ಮುಖ್ಯಮಂತ್ರಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ. ಆದರೆ ಎಎಪಿ ಎಲ್ಲಾ ಪಕ್ಷಗಳಿಗಿಂತ ಮೊದಲು ಸಿಎಂ ಅಭ್ಯರ್ಥಿ ಘೋಷಣೆ ಮಾಡಿದ ಅಚ್ಚರಿ ಮೂಡಿಸಿದೆ.