Yelahanka: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಮಾಜಿ ಸಚಿವ ಡಾ ಕೆ ಸುಧಾಕರ್ (Dr. K Sudhakar) ಅವರನ್ನು ಕಣಕ್ಕಿಳಿಸುವ ಹೈಕಮಾಂಡ್ ತೀರ್ಮಾನದ ವಿರುದ್ಧ ಬಿಜೆಪಿ ಕಾರ್ಯಕರ್ತರು ಬೀದಿಗಿಳಿದು ಹಲವೆಡೆ ಪ್ರತಿಭಟನೆ ನಡೆಸಿದ್ದಾರೆ.ಸೋಮವಾರ ಹಳೆ ಯಲಹಂಕ ಸಂತೆ ವೃತ್ತದ ಕೆಂಪೇಗೌಡ ಪ್ರತಿಮೆ ಮುಂದೆ ಜಮಾಯಿಸಿದ ನೂರಾರು ಬಿಜೆಪಿ (BJP) ಕಾರ್ಯಕರ್ತರು ‘ಗೋಬ್ಯಾಕ್ ಸುಧಾಕರ್’ ಎಂದು ಘೋಷಣೆ ಕೂಗಿ ಅರ್ಧ ಗಂಟೆಗೂ ಹೆಚ್ಚು ಕಾಲ ಮುಖ್ಯರಸ್ತೆ ತಡೆದು ಟೈರ್ಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಯಲಹಂಕ ಶಾಸಕ ಎಸ್ಆರ್ ವಿಶ್ವನಾಥ್ (S R Vishwanath) ಪುತ್ರ ಅಲೋಕ್ ವಿಶ್ವನಾಥ್ ಚಿಕ್ಕಬಳ್ಳಾಪುರ ಟಿಕೆಟ್ ಆಕಾಂಕ್ಷಿಯಾಗಿದ್ದರು. ಕೊನೆ ಕ್ಷಣದಲ್ಲಿ ಎಸ್ಆರ್ ವಿಶ್ವನಾಥ್ ಅವರೇ ನಾನು ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದರು. ಆದರೆ ಬಿಜೆಪಿ ಹೈಕಮಾಂಡ್ ಮಾತ್ರ 2023ರ ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಪ್ರದೀಪ್ ಈಶ್ವರ್ (Pradeep Eshwar) ವಿರುದ್ಧ ಸೋಲು ಕಂಡಿದ್ದ ಡಾ ಕೆ ಸುಧಾಕರ್ ಅವರಿಗೆ ಮತ್ತೊಮ್ಮೆ ಟಿಕೆಟ್ ನೀಡಿದೆ.
ಹೈಕಮಾಂಡ್ನ (High Command) ಈ ನಿರ್ಧಾರದ ವಿರುದ್ಧ ಇದೀಗ ಬಿಜೆಪಿ ಕಾರ್ಯಕರ್ತರೇ ತಿರುಗಿಬಿದ್ದಿದ್ದಾರೆ. ಸೋತು ಸುಣ್ಣವಾಗಿರುವ ಇವರಿಗೆ ಮತ್ಯಾಕೆ ಟಿಕೆಟ್ ಎಂದು ಕಿಡಿ ಕಾರಿದ್ದಾರೆ. ಮಾಚೋಹಳ್ಳಿ ಗ್ರಾಮಪಂಚಾಯತಿ ಮಾಜಿ ಅಧ್ಯಕ್ಷ ಪ್ರಕಾಶ್ ಗೌಡ ಮಾತನಾಡಿ, ಕಾರ್ಯಕರ್ತರೇ ದೇಶ ಮತ್ತು ದೇಶದ ನಾಯಕತ್ವ ನೋಡಿ. ಯಾರೇ ಅಭ್ಯರ್ಥಿಯಾದರೂ ಮೋದಿ ನಮ್ಮ ಅಭ್ಯರ್ಥಿ ಎಂದು ನಾವು ಕೆಲಸ ಮಾಡಬೇಕಾಗಿದೆ. ಆದರೆ ಇದೀಗ ಸುಧಾಕರ್ ಅವರಿಗೆ ಟಿಕೆಟ್ (Ticket) ನೀಡಿರುವುದರಿಂದ ನಾವು ಕ್ಷೇತ್ರದಲ್ಲಿ ಪ್ರಚಾರ ಮಾಡುವುದಿಲ್ಲ.
ಈಗಲೂ ಕಾಲ ಮಿಂಚಿಲ್ಲ. ಅಲೋಕ್ ವಿಶ್ವನಾಥ್ಗೆ (Alok Vishwanath) ಟಿಕೆಟ್ ನೀಡಿದರೆ ಅತಿ ಹೆಚ್ಚು ಮತ ನೀಡುವ ಮೂಲಕ ಅವರನ್ನು ಗೆಲ್ಲಿಸಲು ಸಾಧ್ಯವಿದೆ ಎಂದಿದ್ದಾರೆ ನೂರಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ರಾಷ್ಟೀಯ ಹೆದ್ದಾರಿಯಲ್ಲಿ ‘ಕೋವಿಡ್ ದುಡ್ಡು ಕದ್ದ ಕಳ್ಳ, ಗೋ ಬ್ಯಾಕ್ ಸುಧಾಕರ್’ (Go Back Sudhakar) ಎಂಬ ಬ್ಯಾನರ್ ಹಿಡಿದು ಪ್ರತಿಭಟನೆ ನಡೆಸಿದ್ದಾರೆ.