Golmal in Urban Development Department Karnataka
Bengaluru: ಕಳೆದ 15 ತಿಂಗಳಿಂದ ನಗರಾಭಿವೃದ್ದಿ ಇಲಾಖೆಯ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ 25ಕ್ಕೂ ಹೆಚ್ಚು ಅಧಿಕಾರಿಗಳು ಸುಮ್ಮನೆ ಕುತ್ತಲ್ಲೇ, ಯಾವುದೇ ಕೆಲಸ ಮಾಡದೇ ಲಕ್ಷಗಟ್ಟಲೇ ಸಂಬಳ ತೆಗೆದುಕೊಂಡಿರುವ ಗೋಲ್ಮಾಲ್ (Golmaal) ಇದೀಗ ಬಯಲಾಗಿದೆ. ಸರ್ಕಾರದ ಈ ಎಡವಟ್ಟಿನಿಂದಾಗಿ ರಾಜ್ಯದ ಬೊಕ್ಕಸಕ್ಕೆ ಸುಮಾರು 2.40 ಕೋಟಿ ರೂಪಾಯಿ ನಷ್ಟವಾಗಿದೆ.
ಪ್ರಕರಣವೇನು?
ನಗರಾಭಿವೃದ್ದಿ ಇಲಾಖೆಯಲ್ಲಿ 2023ರ ಮಾರ್ಚ್ (March) ಮತ್ತು ಏಪ್ರಿಲ್ನಲ್ಲಿ ವರ್ಗಾವಣೆಗೊಂಡಿದ್ದ ಸುಮಾರು 25ಕ್ಕೂ ಹೆಚ್ಚು ವಿವಿಧ ಹಂತದ ಅಧಿಕಾರಿಗಳಿಗೆ ಸರ್ಕಾರ ವರ್ಗಾವಣೆ ಮಾಡಿದ್ದರೂ, ಸ್ಥಳ ನಿಯೋಜನೆ ಮಾಡಿಲ್ಲ. ಹೀಗಾಗಿ ಈ ಅಧಿಕಾರಿಗಳು ಕಳೆದ 15 ತಿಂಗಳಿಂದ ಯಾವುದೇ ಕೆಲಸ ಮಾಡದಿದ್ದರೂ, ಲಕ್ಷಗಟ್ಟಲೇ ಸಂಬಳ ಪಡೆದುಕೊಂಡಿದ್ದಾರೆ.
ಇನ್ನು ಈ ಕುರಿತು ರಾಜ್ಯ ಸರ್ಕಾರದ ವಿರುದ್ದ ತೀವ್ರ ಟೀಕಾಪ್ರಹಾರ ನಡೆಸಿರುವ ವಿಪಕ್ಷ ನಾಯಕ ಆರ್. ಅಶೋಕ (R Ashok) ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಎಗ್ಗಿಲ್ಲದೆ ನಡೆಯುತ್ತಿರುವ ವರ್ಗಾವಣೆ ದಂಧೆಯ ಮತ್ತೊಂದು ಕರಾಳ ಮುಖ ಬಯಲಾಗಿದೆ.
ವರ್ಗಾವಣೆ ಡೀಲ್ ಕುದುರದಿದ್ದರೆ ಅಧಿಕಾರಿಗಳಿಗೆ ಸ್ಥಳ ನಿಯೋಜನೆ ಮಾಡದೆ ಬಿಟ್ಟಿ ಸಂಬಳ ಕೊಟ್ಟು ಕೂರಿಸುವ ಪರಿಪಾಠ ಆರಂಭವಾಗಿದ್ದು, ನಗರಾಭಿವೃದ್ದಿ ಇಲಾಖೆಯ 25 ಅಧಿಕಾರಿಗಳಿಗೆ ಕಳೆದ 15 ತಿಂಗಳಿನಿಂದ ಯಾವುದೇ ಸ್ಥಳ ನಿಯುಕ್ತಿ ಮಾಡದೆ ರಾಜ್ಯದ ಬೊಕ್ಕಸಕ್ಕೆ 2.40 ಕೋಟಿ ರೂಪಾಯಿ ನಷ್ಟ ಉಂಟು ಮಾಡಿದೆ ಈ ದರಿದ್ರ ಕಾಂಗ್ರೆಸ್ (Congress) ಸರ್ಕಾರ.
ಸಿಎಂ ಸಿದ್ದರಾಮಯ್ಯ (CM Siddaramaiah) ನವರೇ, ಮೂಡಾ ಹಗರಣದ ಕಡತಗಳನ್ನ ಮೈಸೂರಿನಿಂದ ಬೆಂಗಳೂರಿಗೆ ತಂದು ಅವುಗಳನ್ನ ತಿದ್ದಿ, ತೀಡಿ, ತಿರುಚಿ ಸಾಕ್ಷಿ ನಾಶ ಮಾಡುವಲ್ಲಿ ಬ್ಯುಸಿ ಆಗಿರುವ ತಮ್ಮ ಆಪ್ತ ಸಚಿವ ಭೈರತಿ ಸುರೇಶ್ (Bhirathi Suresh) ಅವರಿಗೆ ಅವರ ಇಲಾಖೆಯಲ್ಲಿ 25 ಅಧಿಕಾರಿಗಳಿಗೆ 15 ತಿಂಗಳಿನಿಂದ ಸ್ಥಳ ನಿಯುಕ್ತಿ ಆಗದಿರುವ ವಿಷಯವೇ ಗೊತ್ತಿಲ್ಲವಂತೆ.
ಇನ್ನಾದರೂ ಅವರಿಗೆ ಮೂಡಾ ಹಗರಣದ ಕಡತ ತಿರುಚುವ ಕೆಲಸದಿಂದ ಮುಕ್ತಿ ನೀಡಿ ಇಲಾಖೆಯ ಕರ್ತವ್ಯದ ಬಗ್ಗೆ ಗಮನ ಹರಿಸಲು ಬಿಡಿ. ಅಂದಹಾಗೆ ರಾಜ್ಯದಲ್ಲಿ ಎಗ್ಗಿಲ್ಲದೇ ನಡೆಯುತ್ತಿರುವ ವರ್ಗಾವಣೆ ದಂಧೆಯಲ್ಲಿ ತಮ್ಮ ಪಾಲೆಷ್ಟು ಸಿಎಂ ಸಿದ್ದರಾಮಯ್ಯನವರೇ? ಎಂದು ಪ್ರಶ್ನಿಸಿದ್ದಾರೆ.