ನವದೆಹಲಿ, ಜೂ. 02: ಈ ಭಾರಿ ದೇಶದಾದ್ಯಂತ ಮುಂಗಾರು ಮಳೆಯು ವಾಡಿಕೆಯಷ್ಟು ಸುರಿಯಲಿದೆ. ಕೆಲವೆಡೆ ಮಾತ್ರ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತನ್ನ ಮುಂಗಾರು ಮುನ್ಸೂಚನೆಯಲ್ಲಿ ಹೇಳಿದೆ. ಆದರೆ, ಕರ್ನಾಟಕ ಮತ್ತು ಕೇರಳದ ಕೆಲವು ಪ್ರದೇಶಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಶೇ 35-45ರಷ್ಟಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
50 ವರ್ಷಗಳ ದೀರ್ಘಾವಧಿ ಸರಾಸರಿಗೆ ಹೋಲಿಸಿದರೆ ಈ ಬಾರಿ ದಕ್ಷಿಣ, ಉತ್ತರ ಮತ್ತು ವಾಯವ್ಯ ಭಾರತದಲ್ಲಿ ವಾಡಿಕೆಯಷ್ಟು ಮಳೆಯಾಗಲಿದೆ. ಮಧ್ಯ ಭಾರತದಲ್ಲಿ ವಾಡಿಕೆಗಿಂತಲೂ ಹೆಚ್ಚು ಮಳೆಯಾಗಲಿದೆ. ಈಶಾನ್ಯ ಭಾರತದಲ್ಲಿ ವಾಡಿಕೆಗಿಂತ ಸ್ವಲ್ಪ ಕಡಿಮೆ ಮಳೆಯಾಗಲಿದೆ. ಆದರೆ ಎಲ್ಲಿಯೂ ಮಳೆಯ ತೀವ್ರ ಕೊರತೆ ಇರುವುದಿಲ್ಲ ಎಂದು ಹವಾಮಾನ ಇಲಾಖೆ ಹೇಳಿದೆ. ಹವಾಮಾನ ಇಲಾಖೆ ಬಿಡುಗಡೆ ಮಾಡಿರುವ 2021ರ ದೀರ್ಘಾವಧಿ ಮುಂಗಾರು ಮುನ್ಸೂಚನೆಯಲ್ಲಿ ಈ ಮಾಹಿತಿ ಇದೆ.
ಜೂನ್ನಿಂದ ಸೆಪ್ಟೆಂಬರ್ವರೆಗೆ ದೀರ್ಘಾವಧಿ ಸರಾಸರಿಯ ಶೇ 101ರಷ್ಟು ಮಳೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಇದರಲ್ಲಿ ಶೇ 4ರಷ್ಟು ವ್ಯತ್ಯಾಸವಾಗುವ ಸಾಧ್ಯತೆ ಇದೆ. ಒಟ್ಟಾರೆ ಮುಂಗಾರಿನಲ್ಲಿ ದೇಶದಾದ್ಯಂತ ವಾಡಿಕೆಯಷ್ಟು ಮಳೆಯಾಗುವ ಕಾರಣ ಕೃಷಿ ಕ್ಷೇತ್ರಕ್ಕೆ ಅನುಕೂಲವಾಗಲಿದೆ ಎಂದು ನಿರೀಕ್ಷಿಸಲಾಗಿದೆ ಎಂದು ಹವಾಮಾನ ಇಲಾಖೆ ಮಹಾ ನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ಅವರು ಹೇಳಿದ್ದಾರೆ.