ನವದೆಹಲಿ, ಜೂ. 01: ಎಷ್ಟೊಂದು ದಿನಗಳ ನಂತರ ಸಾಮಾನ್ಯ ಜನರಿಗೆ ಸಿಹಿ ಸುದ್ದಿ ಸಿಕ್ಕಂತಾಗಿದೆ. ಸದಾ ಬೆಲೆಯೇರಿಕೆಯ ಗಾಬರಿ ಸುದ್ದಿಗಳನ್ನೇ ನೋಡಿ, ಓದಿ, ಕೇಳಿ ಸುಸ್ತಾಗಿದ್ದ ಜನರಿಗೆ ಒಂದು ಒಳ್ಳೆ ಸುದ್ದಿ ಸಿಕ್ಕಿದೆ. ಇಂಡಿಯನ್ ಆಯಿಲ್ ಕಾರ್ಪೊರೇಶನ್ 19 ಕೆಜಿ ವಾಣಿಜ್ಯ ಸಿಲಿಂಡರ್ಗಳ ಬೆಲೆಯನ್ನು ಕಡಿತಗೊಳಿಸಿದೆ. ಆದರೆ ಮನೆಗಳಲ್ಲಿ ಬಳಸುವ ದೇಶೀಯ ಎಲ್ಪಿಜಿಯ ಬೆಲೆಯಲ್ಲಿ ಅಂದರೆ 14.2 ಕೆಜಿ ಸಿಲಿಂಡರ್ ಬೆಲೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಇದಕ್ಕೂ ಮೊದಲು ಮೇ ತಿಂಗಳ ಆರಂಭದಲ್ಲಿ 19 ಕೆಜಿ ಸಿಲಿಂಡರ್ ಬೆಲೆಯನ್ನು ಇಳಿಕೆ ಮಾಡಲಾಗಿತ್ತು.
ಐಒಸಿ ಈ ವಿಚಾರವನ್ನು ತನ್ನ ವೆಬ್ಸೈಟ್ನಲ್ಲೇ ಹಾಕಿಕೊಂಡಿದೆ. ಇದರ ಪ್ರಕಾರ, ಜೂನ್ 1 ರಿಂದ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ಗಳ (Commercial Cylinder) ಬೆಲೆ ಪ್ರತಿ ಸಿಲಿಂಡರ್ಗೆ 1473.50 ರೂಪಾಯಿ ಆಗಿದೆ. ಈ ಮೊದಲು ಅದರ ಬೆಲೆ 1595.50 ರೂಪಾಯಿ ಇತ್ತು. ಅಂದರೆ, ಸಿಲಿಂಡರ್ ಬೆಲೆಯನ್ನು 122 ರೂಪಾಯಿಗಳಷ್ಟು ಕಡಿತಗೊಳಿಸಲಾಗಿದೆ. ಸರ್ಕಾರಿ ಪೆಟ್ರೋಲಿಯಂ ಕಂಪನಿಗಳು ಮೇ ತಿಂಗಳಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯನ್ನು 45.50 ರೂ ವರೆಗೆ ಕಡಿಮೆ ಮಾಡಿದ್ದವು. ಆಗ ಅದರ ಬೆಲೆ 1641 ರೂ.ನಿಂದ 1595.5 ರೂಪಾಯಿಗೆ ಇಳಿದಿತ್ತು.
ಇಂಡಿಯನ್ ಆಯಿಲ್ ಕಾರ್ಪೊರೇಶನ್ ವೆಬ್ಸೈಟ್ ಪ್ರಕಾರ, ದೆಹಲಿಯಲ್ಲಿ 19 ಕೆಜಿ ಗ್ಯಾಸ್ ಸಿಲಿಂಡರ್ನ ಹೊಸ ಬೆಲೆ ಈಗ 1595.50 ಬದಲಿಗೆ 1473.5 ರೂಪಾಯಿ ಆಗಿದೆ. ಹೊಸ ಬೆಲೆ ಮುಂಬೈನಲ್ಲಿ 1545 ರೂಪಾಯಿಗೆ ಬದಲಾಗಿ 1422.5 ರೂಪಾಯಿ, ಕೋಲ್ಕತ್ತಾದಲ್ಲಿ 1667.50 ರೂಪಾಯಿಗೆ ಬದಲಾಗಿ 1544.5 ರೂಪಾಯಿ ಮತ್ತು ಚೆನ್ನೈನಲ್ಲಿ 1725.50 ರೂಪಾಯಿಗಳ ಬದಲು 1603 ರೂಪಾಯಿ ಆಗಿದೆ.