- ಅಕ್ರಮ ವಲಸಿಗರ ವಿರುದ್ಧ ರಾಜ್ಯ (Government action against immigrants) ಸರ್ಕಾರದ ಕಠಿಣ ಕ್ರಮ
- ಅಕ್ರಮವಾಗಿ ನೆಲೆಸಿರುವ ವಲಸಿಗರ ಪತ್ತೆ ಮತ್ತು ಗಡಿಪಾರಿಗೆ ವಿಶೇಷ ತಂಡ ರಚನೆ ವಿಧಾನಸಭೆಯಲ್ಲಿ ಸರ್ಕಾರದ ಸ್ಪಷ್ಟನೆ
- ನಕಲಿ ದಾಖಲೆ ಸೃಷ್ಟಿಸುವ ದಲ್ಲಾಳಿಗಳ ವಿರುದ್ಧ ಕಠಿಣ ಕ್ರಮ
Bengaluru: ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ವಲಸಿಗರನ್ನು ಪತ್ತೆಹಚ್ಚಿ (Government action against immigrants) ಗಡಿಪಾರು ಮಾಡುವ ಉದ್ದೇಶದಿಂದ ವಿಶೇಷ ತಂಡ ರಚಿಸಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಗುರುವಾರ ವಿಧಾನಸಭೆಯಲ್ಲಿ ಈ ಕುರಿತು ಚರ್ಚೆ ನಡೆದಿದ್ದು, ಅಕ್ರಮ ಬಾಂಗ್ಲಾದೇಶಿ ವಲಸಿಗರ ವಿಚಾರವಾಗಿ ಬಿಜೆಪಿ ಉಚ್ಛಾಟಿತ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ (Basanagowda Patil Yatnal) ಗಮನ ಸೆಳೆದರು.

ಅಕ್ರಮ ವಲಸಿಗರ ಬಗ್ಗೆ ಮಾಹಿತಿ ನೀಡುವ ಹಿಂದೂ ಪರ (Government action against immigrants) ಕಾರ್ಯಕರ್ತರಿಗೆ ಪೊಲೀಸ್ ಇಲಾಖೆ ಕಿರುಕುಳ ನೀಡುತ್ತಿದೆ ಎಂಬ ಆರೋಪವನ್ನು ಅವರು ಮುಂದಿಟ್ಟರು.
ಇದಕ್ಕೆ ಸರ್ಕಾರದ ಪರವಾಗಿ ಸಾರಿಗೆ ಹಾಗೂ ಮುಜುರಾಯಿ ಸಚಿವ ರಾಮಲಿಂಗಾರೆಡ್ಡಿ ಉತ್ತರ ನೀಡಿ, ಇಂತಹ ಯಾವುದೇ ಕಿರುಕುಳ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.
ಇನ್ನು ಸಚಿವರ ಹೇಳಿಕೆಯ ಪ್ರಕಾರ, ರಾಜ್ಯದಲ್ಲಿ ಒಟ್ಟು 370 ಅಕ್ರಮ ವಲಸಿಗರು ಪತ್ತೆಯಾಗಿದ್ದು, ಅವರಲ್ಲಿ 213 ಜನರನ್ನು ಈಗಾಗಲೇ ಗಡಿಪಾರು ಮಾಡಲಾಗಿದೆ.
ಇನ್ನುಳಿದ 157 ಮಂದಿಯ ವಿರುದ್ಧ ಅಕ್ರಮ ವಲಸಿಗರ ಬಂಧನ ಕೇಂದ್ರಗಳಲ್ಲಿ (ಎಫ್‌ಡಿಸಿ) ಪ್ರಕರಣಗಳು ದಾಖಲಾಗಿರುವುದರಿಂದ, ಕಾನೂನು ಪ್ರಕ್ರಿಯೆ ಪೂರ್ಣಗೊಂಡ ನಂತರ ಅವರನ್ನು ಕೂಡ ಗಡಿಪಾರು ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ.
ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ಅಕ್ರಮವಾಗಿ ನೆಲೆಸಿರುವ ಯಾರನ್ನೂ ಸಹ ಬಿಡುವುದಿಲ್ಲ ಎಂಬ ಸಂದೇಶವನ್ನು ಸ್ಪಷ್ಟವಾಗಿ ನೀಡಿದೆ.
ಚರ್ಚೆಯ ವೇಳೆ ಬಸನಗೌಡ ಪಾಟೀಲ್ ಯತ್ನಾಳ್ ಅವರು, ರಾಜ್ಯದಲ್ಲಿ 25 ಲಕ್ಷಕ್ಕೂ ಹೆಚ್ಚು ಬಾಂಗ್ಲಾದೇಶಿಯರು ಅಕ್ರಮವಾಗಿ ನೆಲೆಸಿದ್ದಾರೆ ಎಂದು ಆರೋಪಿಸಿದರು.
ಹಾಸನ, ಚಿಕ್ಕಮಗಳೂರು, ಕೊಡಗು ಸೇರಿದಂತೆ ಹಲವು ಜಿಲ್ಲೆಗಳ ಕಾಫಿ ತೋಟಗಳು, ಶಾಪಿಂಗ್ ಮಾಲ್‌ಗಳು, ಐಟಿ-ಬಿಟಿ ಕಂಪನಿಗಳಲ್ಲಿ ಭದ್ರತಾ ಸಿಬ್ಬಂದಿಯಾಗಿ ಇವರು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ನಕಲಿ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಸೇರಿದಂತೆ ಹಲವು ದಾಖಲೆಗಳನ್ನು ತಯಾರಿಸಿಕೊಂಡು ದೊಡ್ಡ ಜಾಲದ ಮೂಲಕ ರಾಜ್ಯದಲ್ಲಿ ನೆಲೆಸಿದ್ದಾರೆ ಎಂದು ಅವರು ಎಚ್ಚರಿಸಿದರು. ಇದಕ್ಕೆ ತಕ್ಷಣ ಕಡಿವಾಣ ಹಾಕದಿದ್ದರೆ ಮುಂದಿನ ದಿನಗಳಲ್ಲಿ ಭಯಾನಕ ಪರಿಸ್ಥಿತಿ ಉಂಟಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ರಾಮಲಿಂಗಾರೆಡ್ಡಿ, ಬೆಂಗಳೂರಿನ ಜನಸಂಖ್ಯೆ ಸುಮಾರು 1.40 ಕೋಟಿ ಇದೆ ಎಂದು ಹೇಳಿ, ಅದರಲ್ಲಿ 25 ಲಕ್ಷ ಬಾಂಗ್ಲಾದೇಶಿಯರು ಇದ್ದಾರೆ ಎನ್ನುವ ಆರೋಪವು ಅತಿರಂಜಿತವಾಗಿದೆ ಎಂದರು.
ರಾಜ್ಯದಲ್ಲಿ ಈಶಾನ್ಯ ರಾಜ್ಯಗಳು, ಪಶ್ಚಿಮ ಬಂಗಾಳ, ಬಿಹಾರ, ರಾಜಸ್ಥಾನ, ತೆಲಂಗಾಣ, ಆಂಧ್ರಪ್ರದೇಶ (Andhra Pradesh) , ಕೇರಳ ಹಾಗೂ ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಿಂದ ಲಕ್ಷಾಂತರ ಜನ ಕೆಲಸಕ್ಕಾಗಿ ವಾಸಿಸುತ್ತಿದ್ದಾರೆ ಎಂದು ವಿವರಿಸಿದರು.
ಈ ಹಿಂದೆಯೂ ಅಕ್ರಮ ವಲಸಿಗರ ಬಗ್ಗೆ ದೂರುಗಳು ಬಂದಾಗ, ಸರ್ಕಾರ ವಿಶೇಷ ತಂಡ ರಚಿಸಿ ಹಾಸನ, ಚಿಕ್ಕಮಗಳೂರು, ಕೊಡಗು ಸೇರಿದಂತೆ ಹಲವು ಕಾಫಿ ಎಸ್ಟೇಟ್‌ಗಳಲ್ಲಿ (Estate) ಪರಿಶೀಲನೆ ನಡೆಸಿದೆ ಎಂದು ಹೇಳಿದರು.
ಅಕ್ರಮ ವಲಸಿಗರು ಎಲ್ಲಿಯೇ ಇದ್ದರೂ ಅವರನ್ನು ಪತ್ತೆ ಮಾಡಿ ಗಡಿಪಾರು ಮಾಡಲಾಗುವುದು ಎಂಬುದರಲ್ಲಿ ಸರ್ಕಾರಕ್ಕೆ ಯಾವುದೇ ಹಿಂಜರಿಕೆ ಇಲ್ಲ ಎಂದು ಸಚಿವರು ತಿಳಿಸಿದರು.
ಆದರೆ, ಬಾಂಗ್ಲಾದೇಶದಿಂದ ಅಕ್ರಮವಾಗಿ ದೇಶದೊಳಗೆ ಪ್ರವೇಶಿಸುವುದು ಕೇಂದ್ರ ಸರ್ಕಾರದ ಗಡಿ ಭದ್ರತಾ ವೈಫಲ್ಯ ಎಂದು ಅವರು ಆರೋಪಿಸಿದರು.
ಅಕ್ರಮ ವಲಸಿಗರ ಬಗ್ಗೆ ಮಾಹಿತಿ ನೀಡುವವರ ಹೆಸರು ಗೌಪ್ಯವಾಗಿರುತ್ತದೆ, ಅವರಿಗೆ ಯಾವುದೇ ತೊಂದರೆ ಆಗದಂತೆ ರಕ್ಷಣೆ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.
ಆದರೆ, ಕಾನೂನು ಕೈಗೆ ತೆಗೆದುಕೊಳ್ಳುವಂತಿಲ್ಲ ಎಂದು ಎಚ್ಚರಿಸಿದರು. ಜೊತೆಗೆ, ಅಕ್ರಮ ವಲಸಿಗರನ್ನು ಕರೆತರುವವರು, ನಕಲಿ ದಾಖಲೆಗಳನ್ನು ಸೃಷ್ಟಿಸುವ ದಲ್ಲಾಳಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಇದನ್ನು ಓದಿ : https://vijayatimes.com/its-time-for-the-state-to-prepare-for-scorching-heat/