ಮರಳು ಅಕ್ರಮಕ್ಕೆ ಇನ್ನು ಕಠಿಣ ಶಿಕ್ಷೆ; ಗೂಂಡಾ (Government issues warning to sand mafia) ಕಾಯ್ದೆ ಜಾರಿಗೆ ಸರ್ಕಾರ ನಿರ್ಧಾರ
ಮರಳು ಮಾಫಿಯಾ ವಿರುದ್ಧ ಸರ್ಕಾರದ ಕಠಿಣ ಕ್ರಮ: ಗೂಂಡಾ ಕಾಯ್ದೆ ಅಸ್ತ್ರ, ನಿರ್ಲಕ್ಷ್ಯ ತೋರಿದ ಪೊಲೀಸರಿಗೂ ಎಚ್ಚರಿಕೆ
ಪ್ರತಿ ತಿಂಗಳು ಠಾಣಾವಾರು ಪ್ರಕರಣಗಳ ಪರಿಶೀಲನೆ ಕಡ್ಡಾಯ; ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲು ಸರ್ಕಾರ ತೀರ್ಮಾನ
ರಾಜ್ಯದಲ್ಲಿ ಹೆಚ್ಚುತ್ತಿರುವ ಅಕ್ರಮ ಮರಳು ಗಣಿಗಾರಿಕೆ, ಸಂಗ್ರಹಣೆ ಹಾಗೂ ಸಾಗಣೆ ಚಟುವಟಿಕೆಗಳಿಗೆ (Government issues warning to sand mafia) ಸಂಪೂರ್ಣ ಕಡಿವಾಣ ಹಾಕಲು ರಾಜ್ಯ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.
ನೈಸರ್ಗಿಕ ಸಂಪತ್ತಿನ ಲೂಟಿ ಮಾತ್ರವಲ್ಲದೆ, ಕಾನೂನು ಸುವ್ಯವಸ್ಥೆಗೂ ಗಂಭೀರ ಸವಾಲಾಗಿರುವ ಮರಳು ಮಾಫಿಯಾ ವಿರುದ್ಧ ಈಗ ಮತ್ತಷ್ಟು ಪರಿಣಾಮಕಾರಿ ಕಾರ್ಯಾಚರಣೆ ನಡೆಸಲು ಪೊಲೀಸ್ ಇಲಾಖೆ ಹಾಗೂ ಸಂಬಂಧಿತ ಇಲಾಖೆಗಳು ಸಜ್ಜಾಗಿವೆ.

ಈ ಸಂಬಂಧ ರಾಜ್ಯದ ಎಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮಹತ್ವದ ನಿರ್ದೇಶನಗಳನ್ನು ನೀಡಲಾಗಿದ್ದು, ಅಕ್ರಮ ಮರಳು ದಂಧೆಯಲ್ಲಿ ತೊಡಗಿರುವವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ.
ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ನಿರ್ದೇಶನದ ಮೇರೆಗೆ ಪೊಲೀಸ್ ಮಹಾನಿರ್ದೇಶಕ ಹಾಗೂ ಮಹಾ ಪರಿಶೀಲಕ (ಡಿಜಿ & ಐಜಿಪಿ) ಎಂ.ಎ. ಸಲೀಂ ಅವರು ರಾಜ್ಯದ ಜಿಲ್ಲೆ ಮತ್ತು ತಾಲ್ಲೂಕು ಮಟ್ಟದ ಪೊಲೀಸ್ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ.
ಅದರಂತೆ, ಅಕ್ರಮ ಮರಳು ಗಣಿಗಾರಿಕೆ ನಡೆಯುವ ಪ್ರದೇಶಗಳನ್ನು ಗುರುತಿಸಿ ನಿರಂತರ ನಿಗಾ ವಹಿಸುವುದು, ಅಕ್ರಮ ಸಂಗ್ರಹಣೆ ಮತ್ತು ಸಾಗಣೆಯನ್ನು ತಡೆಯುವುದು ಹಾಗೂ ತಪ್ಪಿತಸ್ಥರ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳುವುದು ಸ್ಥಳೀಯ ಪೊಲೀಸ್ ಅಧಿಕಾರಿಗಳ ಪ್ರಮುಖ ಜವಾಬ್ದಾರಿಯಾಗಿರುತ್ತದೆ.
ಕಾರ್ಯಪಡೆಗಳು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದ್ದು, ಪ್ರತಿ ಪ್ರಕರಣದ ಮೇಲೂ ಸೂಕ್ತ ನಿಗಾವಹಿಸುವಂತೆ ನಿರ್ದೇಶಿಸಲಾಗಿದೆ.
ರಾಜ್ಯಾಂತರ ಗಡಿಗಳು ಮತ್ತು ಗಡಿ ಭಾಗಗಳಲ್ಲಿ ನಡೆಯುತ್ತಿರುವ ಅಕ್ರಮ ಮರಳು ಸಾಗಣೆಗೆ ವಿಶೇಷ ಗಮನ ಹರಿಸಲು ಸರ್ಕಾರ ಸೂಚಿಸಿದೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ
ಮಾತ್ರವಲ್ಲದೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಜಂಟಿ ಕಾರ್ಯಾಚರಣೆ ನಡೆಸಲು ಸೂಚಿಸಲಾಗಿದೆ.
ಅಕ್ರಮ ಮರಳು ಸಾಗಣೆ ನಡೆಯುವ ಪ್ರಮುಖ ಮಾರ್ಗಗಳಲ್ಲಿ ನಿರಂತರ ತಪಾಸಣೆ, ಗುಪ್ತಚರ ಮಾಹಿತಿ ಸಂಗ್ರಹಣೆ ಹಾಗೂ ಅಗತ್ಯ ಮೂಲಸೌಕರ್ಯವನ್ನು ಬಲಪಡಿಸುವ ಮೂಲಕ ದಂಧೆಗೆ ತಡೆ ಹಾಕುವ ಉದ್ದೇಶವನ್ನು ಸರ್ಕಾರ ಹೊಂದಿದೆ.
ತನಿಖಾ ಮತ್ತು ಜಾರಿ ಕೇಂದ್ರಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿಯನ್ನೂ ಅಧಿಕಾರಿಗಳಿಗೆ ವಹಿಸಲಾಗಿದೆ.
ಸರ್ಕಾರ ಕೇವಲ ಅಕ್ರಮ ದಂಧೆ ನಡೆಸುವವರ ವಿರುದ್ಧ ಮಾತ್ರವಲ್ಲ, ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳ ವಿರುದ್ಧವೂ ಶಿಸ್ತು ಕ್ರಮ ಜರುಗಿಸುವ ಎಚ್ಚರಿಕೆ ನೀಡಿದೆ.
ಪದೇಪದೇ ಅಕ್ರಮ ಮರಳು ದಂಧೆಯಲ್ಲಿ ತೊಡಗುವ ಅಭ್ಯಾಸದ ಅಪರಾಧಿಗಳ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲು ಪೊಲೀಸ್ ಘಟಕಗಳಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ.
ಕಾನೂನಿನ ಅನುಷ್ಠಾನದಲ್ಲಿ ಯಾವುದೇ ರಾಜಿ ಇರಬಾರದು ಎಂದು ಸರ್ಕಾರ ಸೂಚಿಸಿದ್ದು, ನೈಸರ್ಗಿಕ ಸಂಪತ್ತಿನ ರಕ್ಷಣೆ ಹಾಗೂ ಕಾನೂನಿನ ಆಳ್ವಿಕೆಯನ್ನು ಕಾಪಾಡುವುದು ತನ್ನ
ಮೊದಲ ಆದ್ಯತೆ ಎಂದು ಪುನರುಚ್ಚರಿಸಿದೆ. ಕರ್ತವ್ಯಲೋಪ ಕಂಡುಬಂದರೆ ಸಂಬಂಧಿಸಿದ ಅಧಿಕಾರಿಗಳ ಮೇಲೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಅಕ್ರಮ ಮರಳು ಗಣಿಗಾರಿಕೆ, ಸಾಗಣೆ ಹಾಗೂ ಸಂಗ್ರಹಣೆಗೆ ಸಂಬಂಧಿಸಿದ ಪ್ರಕರಣಗಳ ಪ್ರಗತಿಯನ್ನು ಪ್ರತಿ ತಿಂಗಳ ಅಪರಾಧ ಪರಿಶೀಲನಾ ಸಭೆಯಲ್ಲಿ ಠಾಣಾವಾರು ಕಡ್ಡಾಯವಾಗಿ ಪರಿಶೀಲಿಸಲು ಸೂಚಿಸಲಾಗಿದೆ.
ಅಗತ್ಯವಿದ್ದಲ್ಲಿ ಅಧೀನ ಅಧಿಕಾರಿಗಳಿಗೆ ಹೊಸ ನಿರ್ದೇಶನಗಳನ್ನು ನೀಡಿ ಕಾರ್ಯಾಚರಣೆಯನ್ನು ಇನ್ನಷ್ಟು ಚುರುಕುಗೊಳಿಸಲು ಡಿಜಿ & ಐಜಿಪಿ ಸೂಚಿಸಿದ್ದಾರೆ. ಸರ್ಕಾರದ ಈ ಹೊಸ
ಕ್ರಮದಿಂದ ಅಕ್ರಮ ಮರಳು ದಂಧೆಗೆ ದೊಡ್ಡ ಮಟ್ಟದ ಹೊಡೆತ ಬೀಳುವ ನಿರೀಕ್ಷೆ ವ್ಯಕ್ತವಾಗಿದ್ದು, ಕಾನೂನು ಜಾರಿ ವ್ಯವಸ್ಥೆಯಲ್ಲಿ ಜವಾಬ್ದಾರಿತನ ಹೆಚ್ಚುವ ಸಾಧ್ಯತೆಯೂ ಇದೆ.
ಪರಿಸರ ಸಂರಕ್ಷಣೆ, ನೈಸರ್ಗಿಕ ಸಂಪತ್ತಿನ ಉಳಿವು ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಕೈಗೊಂಡಿರುವ ಈ ಕ್ರಮಗಳು ರಾಜ್ಯದಲ್ಲಿ ಅಕ್ರಮ ಮರಳು ಮಾಫಿಯಾ ನಿಯಂತ್ರಣಕ್ಕೆ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗುತ್ತಿದೆ.
ಇದನ್ನು ಓದಿ : https://vijayatimes.com/vehicle-prices-hike/