ಹೈದರಾಬಾದ್, ಮೇ. 12: ಆಂಧ್ರ ಪ್ರದೇಶದಲ್ಲಿ ಕೊರೊನಾ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಂಜಾನ್ ಆಚರಣೆಗೆ ಆಂಧ್ರ ಸರ್ಕಾರ ಮಹತ್ವದ ಆದೇಶ ಜಾರಿ ಮಾಡಿದೆ. ಈದ್-ಉಲ್-ಫಿತರ್ ದಿನ ಮಸೀದಿಗಳಲ್ಲಿ ಕೊರೊನಾ ನಿಯಮಗಳನ್ನು ಪಾಲಿಸುವಂತೆ ಆದೇಶಿಸಿದೆ. ಹಾಗೂ ಈದ್ಗಾ, ಬಹಿರಂಗ ಪ್ರದೇಶಗಳಲ್ಲಿ ಪ್ರಾರ್ಥನೆ ಮಾಡುವುದಕ್ಕೆ ನಿಷೇಧ ಹೇರಲಾಗಿದೆ. ಸಾಧ್ಯವಾದಷ್ಟು ಎಲ್ಲರೂ ತಮ್ಮ ಮನೆಗಳಲ್ಲಿಯೇ ಪ್ರಾರ್ಥನೆ ಸಲ್ಲಿಸಲು ಸೂಚನೆ ನೀಡಲಾಗಿದೆ. ಒಂದೇ ಕಡೆ 50 ಜನರಿಗಿಂತ ಹೆಚ್ಚಿನ ಜನರು ಸೇರಬಾರದು, ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ ಧರಿಸುವುದು ಕಡ್ಡಾಯ. ಬೆಳಿಗ್ಗೆ 6 ರಿಂದ12 ಗಂಟೆಯ ವರೆಗೆ 2 ಹಂತಗಳಲ್ಲಿ ಪ್ರಾರ್ಥನೆ ಮಾಡಬಹುದು. ಇನ್ನು ಮುಖ್ಯವಾಗಿ ಶುಭಾಶಯ ಹೇಳಲು ಕೈ ಕುಲುಕುವುದು, ಆಲಿಂಗನ ಮಾಡುವುದನ್ನು ನಿಷೇಧಿಸಲಾಗಿದೆ.
ನಿನ್ನೆ ನಡೆದ ರಾಜ್ಯ ಕ್ಯಾಬಿನೆಟ್ ಸಭೆಯಲ್ಲಿ ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದು ತೆಲಂಗಾಣದಲ್ಲಿ ಮೇ 12 ಅಂದ್ರೆ ಇಂದಿನಿಂದ 10 ದಿನಗಳ ಲಾಕ್ಡೌನ್ ಜಾರಿಯಾಗಿದೆ. ಇಂದಿನಿಂದ 10 ದಿನಗಳ ಕಾಲ ಮುಂಜಾನೆ 6ಗಂಟೆಯಿಂದ ಬೆಳಗ್ಗೆ 10 ಗಂಟೆವರೆಗೆ ಮಾತ್ರ ಅಗತ್ಯವಸ್ತುಗಳು ಸಿಗಲಿವೆ. ಹೀಗಾಗಿ ಈಗ ಮುಸ್ಲಿಮರ ಪವಿತ್ರ ಹಬ್ಬ ರಂಜಾನ್ ಬರುತ್ತಿದ್ದು ಈ ಬಗ್ಗೆ ಕೆಲವು ನಿಯಮಾವಳಿಗಳನ್ನು ಸರ್ಕಾರ ಬಿಡುಗಡೆ ಮಾಡಿದೆ.
ಸೋಂಕಿತ ಭೀಕರತೆ ಹೆಚ್ಚಿರುವುದರಿಂದ ವೃದ್ಧರು, ಮಕ್ಕಳು, ಅನಾರೋಗ್ಯಕ್ಕೆ ಒಳಗಾದವರು ಮನೆಗಳಲ್ಲಿಯೇ ಪ್ರಾರ್ಥನೆ ಸಲ್ಲಿಸಬೇಕು. ಮಾಸ್ಕ್ ಧರಿಸದಿದ್ದರೆ ಅನುಮತಿ ಇಲ್ಲ, ಸ್ಯಾನಿಟೈಸರ್, ಸಾಬೂನಿನಿಂದ ಕೈ ತೊಳೆದು ಶುಭ್ರತೆ ಪಾಲಿಸಬೇಕು. ಮಸೀದ್ಗಳ ನಿರ್ವಾಹಕರು ಕೊವಿಡ್ ನಿಯಮಗಳನ್ನು ಪಾಲಿಸಬೇಕು. ಜಿಲ್ಲಾಧಿಕಾರಿಗಳು, ಹಿರಿಯ ಪೊಲೀಸ್ ಅಧಿಕಾರಿಗಳು, ಕಮಿಷನರ್ಗಳು ಕೊವಿಡ್ ನಿಯಮ ಪಾಲನೆ ಬಗ್ಗೆ ಪರಿಶೀಲನೆ ಮಾಡಬೇಕೆಂದು ಆಂಧ್ರಪ್ರದೇಶ ಸರಕಾರ ಆದೇಶ ಹೊರಡಿಸಿದೆ.