ಕೇರಳ, ಜು. 19: ಇತ್ತೀಚೆಗಿನ ದಿನಗಳಲ್ಲಿ ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಕೇರಳ ಸರ್ಕಾರ ಸಾರ್ವಜನಿಕ, ಖಾಸಗಿ ಮತ್ತು ಸೈಬರ್ ತಾಣಗಳಲ್ಲಿ ಮಹಿಳೆಯರು ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳುವಂತಹ ಸಮಗ್ರ ಯೋಜನೆಯೊಂದನ್ನು ಆರಂಭಿಸಿತು.
ಪಿಂಕ್ ಪ್ರೊಟೆಕ್ಷನ್’ ಹೆಸರಿನ ಈ ಯೋಜನೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಚಾಲನೆ ನೀಡಿದರು. ಮಹಿಳಾ ಪರವಾದ ಈ ’ಪಿಂಕ್ ಪ್ರೊಟೆಕ್ಷನ್’ ಯೋಜನೆಯಡಿ ಸರ್ಕಾರ 10 ಕಾರುಗಳು, ಬುಲೆಟ್‌ಗಳು ಮತ್ತು 20 ಬೈಸಿಕಲ್‌ಗಳು ಸೇರಿ 40 ದ್ವಿಚಕ್ರ ವಾಹನಗಳನ್ನು ಇದಕ್ಕಾಗಿ ಮೀಸಲಿರಿಸಿದೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ವರದಕ್ಷಿಣೆಗೆ ಸಂಬಂಧಿಸಿದ ಕಿರುಕುಳ, ದೌರ್ಜನ್ಯ, ಜಾಲತಾಣಗಳ ಮೂಲಕ ದೌರ್ಜನ್ಯ ಎಸಗುವುದು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯ ವಿರುದ್ಧ ದೌರ್ಜನ್ಯ ನಡೆಸುವಂತಹ ಪ್ರಕರಣಗಳನ್ನು ತಡೆಯುವುದು ಪಿಂಕ್ ಪ್ರೊಟೆಕ್ಷನ್ ಯೋಜನೆಯ ಪ್ರಮುಖ ಉದ್ದೇಶ.
ಸದ್ಯ ಚಾಲ್ತಿಯಲ್ಲಿರುವ ಪಿಂಕ್ ಗಸ್ತು ತಿರುಗುವ ವ್ಯವಸ್ಥೆಯನ್ನು ಹೊಸ ಚಟುವಟಿಕೆಗಳ ಮೂಲಕ ಮತ್ತಷ್ಟು ಬಲಪಡಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.