ಬೆಳಗಾವಿ ಡಿ 17: ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆಯ ಹಾನಿ ಕಂಡಿಸಿ ರಾಜ್ಯ ಬಿಜೆಪಿ ನಾಯಕರಾದ ಆರಗ ಜ್ಞಾನೇಂದ್ರ ಮತ್ತು ಗೋವಿಂದ್ ಕಾರಜೋಳ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಬೆಳಗಾವಿ ನಗರದಲ್ಲಿ ಬೆಳಗಿನ ಜಾವದ ವೇಳೆ ಸ್ವಾತಂತ್ರ್ಯ ವೀರನಾದ, ಸಂಗೊಳ್ಳಿ ರಾಯಣ್ಣ ರವರ ಪ್ರತಿಮೆಗೆ ಹಾನಿ ಮಾಡಿರುವ ಘಟನೆಯನ್ನು ಖಂಡಿಸುತ್ತೇನೆ. ಸಂಗೊಳ್ಳಿ ರಾಯಣ್ಣ ಹಾಗೂ ಶಿವಾಜಿ ಮಹಾರಾಜ್ ಅವರು ನಮ್ಮೆಲ್ಲರ ಹೆಮ್ಮೆಯ ಪ್ರತೀಕವಾಗಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ‘ಪ್ರತಿ ನಾಗರಿಕರೂ ಹೆಮ್ಮೆ ಹಾಗೂ ಗರ್ವದಿಂದ ನೆನಸಿಕೊಳ್ಳುವಂತ ಭಾರತೀಯ ಪುತ್ರರು ಅವರು. ಇವರ ಹೆಸರಿನಲ್ಲಿ ಕೆಲವು ಕಿಡಿಗೇಡಿಗಳು ಭಾಷಾ ಹಾಗೂ ಸಹೋದರತ್ವ ಬಾಂಧವ್ಯವನ್ನು ಕೆಡಿಸುವಂತಹ ಕೃತ್ಯ ಎಸಗಿರುವುದು ಅಕ್ಷಮ್ಯ ಅಪರಾಧವಾಗಿದೆ’ ಎಂದಿದ್ದಾರೆ.
‘ಈ ಕುರಿತು ಮಾಹಿತಿಯನ್ನು ಪಡೆದುಕೊಂಡಿದ್ದೇನೆ. ಬೆಂಗಳೂರು ಹಾಗೂ ಬೆಳಗಾವಿ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಎಫ್ಐಆರ್ ದಾಖಲಾಗಿದ್ದು, ಕೆಲವರನ್ನು ವಶಕ್ಕೆ ಪಡೆಯಲಾಗಿದೆ. ರಾಜ್ಯದ ಜನತೆ ಶಾಂತಿ ಹಾಗೂ ಸಾಮರಸ್ಯ ಕಾಪಾಡಲು ಸಹಕರಿಸಬೇಕೆಂದು ವಿನಂತಿಸುತ್ತೇನೆ’ ಎಂದು ತಿಳಿಸಿದ್ದಾರೆ.
ಪ್ರತಿಮೆ ಹಾನಿಯ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಗೋವಿಂದ್ ಕಾರಜೋಳ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಪುಂಡರು, ದುಷ್ಕರ್ಮಿಗಳು ಮಾಡಿದ ಅಪಮಾನ ಹೇಯಕೃತ್ಯ. ಇದು ಖಂಡನಾರ್ಹ, ಶಿವಾಜಿ ಮಹಾರಾಜರ ಪೂರ್ವಜರುಕರ್ನಾಟಕದವರು. ಯಾವುದೇ ಜಾತಿ, ಮತ, ಪಂಥ, ಭಾಷೆಗೆ ಸೀಮಿತವಾದ ಸಂಕುಚಿತ ಮನೋಭಾವ ಸಲ್ಲದು’ ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ತಿಳಿಸಿದರು.