ಬೆಂಗಳೂರು ನಗರದ ಕಸ ನಿರ್ವಹಣೆಯನ್ನು ಸುಗಮಗೊಳಿಸಲು (GPS tracking in garbage vehicles) ಮತ್ತು ಕಸ ಮಾಫಿಯಾದ ಅಕ್ರಮಗಳಿಗೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಂಡಿದೆ.
ನಗರದಲ್ಲಿ ಇತ್ತೀಚೆಗೆ ಕಸದ ಸಮಸ್ಯೆ ಹೆಚ್ಚಾಗುತ್ತಿರುವುದನ್ನು ತಡೆಗಟ್ಟಲು, ಪ್ರತಿಯೊಂದು ಕಸ ಸಂಗ್ರಹಣಾ ವಾಹನಕ್ಕೂ ಜಿಪಿಎಸ್ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗಿದೆ.
ಕಸ ಸಾಗಣೆ ವಾಹನಗಳಿಗೆ ಜಿಪಿಎಸ್ ಅಳವಡಿಸಬೇಕು ಎಂದು ಹೈಕೋರ್ಟ್ (High Court) ಈಗಾಗಲೇ ನಿರ್ದೇಶನ ನೀಡಿದ್ದರೂ, ಪ್ರಸ್ತುತ ಅದನ್ನು ಸಮರ್ಪಕವಾಗಿ ಪಾಲಿಸುತ್ತಿಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನು ಮುಂದೆ ಈ ನಿಯಮವನ್ನು ಉಲ್ಲಂಘಿಸುವ ವಾಹನಗಳ ಗುತ್ತಿಗೆದಾರರಿಗೆ ಬಿಲ್ ಪಾವತಿಯನ್ನು ಮಾಡಲಾಗುವುದಿಲ್ಲ ಎಂದು ಅವರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.
ಗುರುವಾರ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಹಾಗೂ ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ಲಿಮಿಟೆಡ್ (BSWML) ಅಧಿಕಾರಿಗಳೊಂದಿಗೆ ನಡೆಸಿದ ಸಭೆಯ ಬಳಿಕ ಮಾತನಾಡಿದ ಸಚಿವರು, ನಗರದ ಕಸದ ಸಮಸ್ಯೆಗೆ ಶೇ. 10 ರಷ್ಟು ಸಾರ್ವಜನಿಕರ ಬೇಜವಾಬ್ದಾರಿತನ ಕಾರಣವಾದರೆ, ಇನ್ನು ಶೇ. 20 ರಷ್ಟು ಲೋಪದೋಷಗಳು ಪಾಲಿಕೆಯ ವ್ಯವಸ್ಥೆಯಲ್ಲೇ ಇವೆ ಎಂದು ಒಪ್ಪಿಕೊಂಡಿದ್ದಾರೆ.
ವಾಹನಗಳು ಸರಿಯಾದ ಸಮಯಕ್ಕೆ ತಲುಪದ ಕಾರಣ ಜನರು ರಸ್ತೆ ಬದಿಯಲ್ಲಿ (GPS tracking in garbage vehicles) ಕಸ ಸುರಿಯುತ್ತಿದ್ದು, ಇದು ಸಾರ್ವಜನಿಕರ ಆರೋಗ್ಯಕ್ಕೆ ಹಾನಿಕಾರಕವಾಗುವುದರ ಜೊತೆಗೆ ನಗರದ ಸೌಂದರ್ಯಕ್ಕೂ ಧಕ್ಕೆ ತರುತ್ತಿದೆ.
ಈ ಸಮಸ್ಯೆಯನ್ನು ತಡೆಗಟ್ಟಲು ಕಸದ ವಾಹನಗಳು ನಿಗದಿತ ಸಮಯಕ್ಕೆ ಮನೆ ಮನೆಗೆ ಹೋಗಿ ಕಸ ಸಂಗ್ರಹಿಸದಿದ್ದರೆ, ಸಂಬಂಧಪಟ್ಟ ಅಧಿಕಾರಿಗಳ ಮೇಲೆಯೇ ಕಠಿಣ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.
ಇದೇ ವೇಳೆ ಸಾರ್ವಜನಿಕರ ಜವಾಬ್ದಾರಿಯನ್ನು ನೆನಪಿಸಿದ ಸಚಿವರು, ಕಸ ನಿರ್ವಹಣೆ ಕೇವಲ ಸರ್ಕಾರದಿಂದ ಮಾತ್ರ ಸಾಧ್ಯವಿಲ್ಲ, ಅದಕ್ಕೆ ನಾಗರಿಕರ ಸಹಕಾರವೂ ಅಷ್ಟೇ ಮುಖ್ಯ
ಎಂದಿದ್ದಾರೆ. ವಾಹನಗಳು ಬರುವ ನಿರ್ದಿಷ್ಟ ಸಮಯವನ್ನು ಮುಂಚಿತವಾಗಿಯೇ ತಿಳಿಸಲಾಗುತ್ತದೆಯಾದ್ದರಿಂದ, ಸಾರ್ವಜನಿಕರು ಆ ಸಮಯಕ್ಕೆ ಸರಿಯಾಗಿ ಕಸವನ್ನು ನೀಡಬೇಕು.
ಸರ್ಕಾರ ಎಷ್ಟು ಬಾರಿ ಜಾಗೃತಿ ಮೂಡಿಸಿದರೂ ಇಂದಿಗೂ ಶೇ. 40 ರಷ್ಟು ಜನ ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸದೆ ಹಾಗೆಯೇ ನೀಡುತ್ತಿದ್ದಾರೆ. ಸದ್ಯ ನಗರದ ಕೆಲವು ಭಾಗಗಳಲ್ಲಿ ಕಸ ವಿಂಗಡಣೆ ಪ್ರಮಾಣ ಶೇ. 65 ರಿಂದ ಶೇ. 80 ರಷ್ಟಿದ್ದರೆ, ಇನ್ನು ಕೆಲವು ಕಡೆ ಅದು ಕೇವಲ ಶೇ. 45 ರಷ್ಟು ಮಾತ್ರ ಇದೆ.
ಇನ್ನು ಮುಂದೆ ನಿಯಮ ಮೀರಿ ವಿಂಗಡಿಸದ ಕಸವನ್ನು ಸಂಗ್ರಹಿಸಿದರೆ, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಕೊನೆಯದಾಗಿ, ಬೆಂಗಳೂರಿನ ಕಸದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಸಚಿವರು, ಶೀಘ್ರದಲ್ಲೇ ತಾವೇ ಸ್ವತಃ ನಗರದ ವಿವಿಧ ಪ್ರದೇಶಗಳಲ್ಲಿ ಪರಿಶೀಲನೆ
ನಡೆಸಲಿದ್ದಾರೆ. ಎಲ್ಲಿ ಕಸ ಸಂಗ್ರಹಣೆ ಸರಿಯಾಗಿ ನಡೆಯುತ್ತಿಲ್ಲವೋ ಅಲ್ಲಿನ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಕಸ ಸಂಗ್ರಹಣೆಯಲ್ಲಿ ಯಾವುದೇ ರೀತಿಯ ಅನಿಯಮಿತತೆ ಕಂಡುಬಂದರೂ ಬಿಎಸ್‌ಡಬ್ಲ್ಯುಎಂಎಲ್ (BSWML) ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು
ಎಚ್ಚರಿಸಿರುವ ಸಚಿವರು, ಸಾರ್ವಜನಿಕರೂ ಸಹ ತಮ್ಮ ಭಾಗದಲ್ಲಿ ಇಂತಹ ಸಮಸ್ಯೆಗಳಿದ್ದರೆ ಅದನ್ನು ಅಧಿಕಾರಿಗಳ ಗಮನಕ್ಕೆ ತಂದು ವರದಿ ಮಾಡಬೇಕೆಂದು ವಿನಂತಿಸಿದ್ದಾರೆ.
ಇದನ್ನು ಓದಿ : https://vijayatimes.com/telegram-ban-till-neet-exam/