ಬೆಂಗಳೂರು, ಡಿ. 30: ರಾಜ್ಯದ ಬಿಜೆಪಿ ಸರ್ಕಾರದ ರೈತ ವಿರೋಧಿ ಹಾಗೂ ಬಡವರ ವಿರೋಧಿ ನೀತಿಗಳಿಂದ ರೋಸಿ ಹೋಗಿರುವ ಗ್ರಾಮೀಣ ಜನತೆ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಉತ್ತರ ನೀಡುತ್ತಿದ್ದು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭಾರತೀಯ ಜನತಾ ಪಕ್ಷದ ರೈತವಿರೋಧಿ ಮತ್ತು ಬಡವರ ವಿರೋಧಿ ನೀತಿಯಿಂದ ರೋಸಿಹೋದ ಗ್ರಾಮೀಣ ಜನತೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡುತ್ತಿದ್ದು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವಿನ ಹಾದಿಯಲ್ಲಿರುವ ವರದಿಗಳು ಬರುತ್ತಿವೆ.
ಪಂಚಾಯತ್ ವ್ಯವಸ್ಥೆ ಜಾರಿಗೆ ಬಂದ ದಿನದಿಂದ ಗ್ರಾಮೀಣ ಪ್ರದೇಶದ ಮತದಾರರು ಎಂದೂ ಕಾಂಗ್ರೆಸ್ ಕೈಬಿಟ್ಟಿಲ್ಲ. ರೈತಪರ, ಬಡವರ ಪರ ಮತ್ತು ಗ್ರಾಮಭಾರತದ ಪರವಾಗಿರುವ ಕಾಂಗ್ರೆಸ್ ನೀತಿ ಮತ್ತು ಕಾರ್ಯಕ್ರಮಗಳು ಇದಕ್ಕೆ ಕಾರಣ. ಗೆಲುವಿನ ಪರಂಪರೆ ಈ ಬಾರಿಯೂ ಮುಂದುವರಿಯಲಿದೆ.
ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಇದು ಸತ್ವ ಪರೀಕ್ಷೆಯ ಕಾಲ. ಮತದಾರರ ವಿಶ್ವಾಸವನ್ನು ಗೆಲ್ಲಲಾಗದ ಬಿಜೆಪಿ ಹಲವಾರು ಕಡೆಗಳಲ್ಲಿ ನಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಆಸೆ-ಆಮಿಷ ಮತ್ತು ಬೆದರಿಕೆ ಮೂಲಕ ಸೆಳೆಯುವ ಪ್ರಯತ್ನ ಮಾಡುತ್ತಿರುವ ಬಗ್ಗೆ ದೂರುಗಳಿವೆ. ಇಂತಹ ಕೃತ್ಯಗಳು ಖಂಡನೀಯ ಎಂದು ಟ್ವೀಟ್ ಮೂಲಕ ಟೀಕಿಸಿದ್ದಾರೆ.