ಬೆಂಗಳೂರು, ಮಾ. 11: ಎಂಥಾ ಶಕ್ತಿಯ ವಿರುದ್ಧ ಹೋರಾಡಿಯಾದರೂ ಗೆಲ್ಲುವ ಶಕ್ತಿ ಮಮತಾ ಬ್ಯಾನರ್ಜಿ ಅವರಿಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ದೀದಿಗೆ ನೈತಿಕ ಬೆಂಬಲ ನೀಡಿದ್ದಾರೆ.
ಪಶ್ಚಿಮ ಬಂಗಾಳ ಚುನಾವಣೆ ಹಿನ್ನೆಲೆಯಲ್ಲಿ ಮಮತಾ ಬ್ಯಾನರ್ಜಿ ಮೇಲೆ ನಡೆದಿರುವ ಹಲ್ಲೆ ಕುರಿತು ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಅವರು, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮೇಲಿನ ಹಲ್ಲೆ ಘಟನೆ ತಿಳಿದು ಆಘಾತವಾಯ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಶೀಘ್ರ ಗುಣಮುಖರಾಗಲಿ. ಚುನಾವಣೆಗಳನ್ನು ಪ್ರಜಾಸತ್ತಾತ್ಮಕವಾಗಿ ಗೆಲ್ಲಬೇಕು. ಹಿಂಸೆಯಿಂದ ಅಲ್ಲ. ಘಟನೆಯನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಬೇಕು.ಚುನಾವಣಾ ವ್ಯವಸ್ಥೆಯನ್ನು ರಕ್ಷಿಸಬೇಕು.
ಅಲ್ಲದೇ, ಬಂಗಾಳದಲ್ಲಿ ಅತ್ಯಂತ ಜನಪರ ಮತ್ತು ಸ್ವಚ್ಛ ಆಡಳಿತವನ್ನು ಮಮತಾ ಬ್ಯಾನರ್ಜಿ ನೀಡಿದ್ದಾರೆ. ಹೀಗಾಗಿ ಅವರಿಗೆ ಜನಬೆಂಬಲ ಅಪಾರವಾಗಿದೆ. ಎಂಥ ಶಕ್ತಿಯ ವಿರುದ್ಧ ಹೋರಾಡಿಯಾದರೂ ಬಂಗಾಳವನ್ನು ಗೆಲ್ಲುವ ಶಕ್ತಿ ಮಮತಾ ಅವರಿಗಿದೆ. ಈ ಚುನಾವಣೆಯನ್ನು ಅವರು ಗೆಲ್ಲುತ್ತಾರೆ ಕೂಡ. ಅವರಿಗೆ ಈಗ ನೈತಿಕ ಬೆಂಬಲ ನೀಡಬೇಕಿದೆ. ನಾನು ಅವರ ಬೆಂಬಲಕ್ಕಿರುವೆ ಎಂದು ಹೇಳಿದ್ದಾರೆ.