ಮೈಸೂರು ಭಾಗದಲ್ಲಿ ಪ್ರಬಲ ನಾಯಕರಾಗಿರುವ ಜಿ.ಟಿ ದೇವೇಗೌಡರನ್ನು(GT Devegowda) ಬಿಜೆಪಿಗೆ(BJP) ಸೆಳೆಯಲು ಕಮಲ ಪಾಳಯದಲ್ಲಿ ಭರ್ಜರಿ ಕಸರತ್ತು ನಡೆದಿದೆ.
ಈಗಾಗಲೇ ಜೆಡಿಎಸ್ನಿಂದ ಒಂದು ಕಾಲು ಹೊರಗಿಟ್ಟಿರುವ ಜಿ.ಟಿ ದೇವೇಗೌಡರನ್ನು ಸೆಳೆಯಲು ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪಕ್ಷಗಳು ನಿರಂತರ ಮಾತುಕತೆ ನಡೆಸುತ್ತಿವೆ. ಇದೀಗ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್(ST Somashekar) ಮತ್ತು ಜಿ.ಟಿ ದೇವೇಗೌಡರು(GT Devegowda) ಮೈಸೂರಿನಲ್ಲಿ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಬಿಜೆಪಿ ಸೇರಲು ಜಿ.ಟಿ ದೇವೇಗೌಡರು ಈಗಾಗಲೇ ಅನೇಕ ಷರತ್ತುಗಳನ್ನು ವಿಧಿಸಿದ್ದಾರೆ.
ನಾನು ಬಿಜೆಪಿಗೆ ಸೇರಿದರೆ ನನ್ನ ಮಗ ಹರೀಶ್ಗೌಡನಿಗೂ ಟಿಕೆಟ್ ನೀಡಬೇಕು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ನನ್ನನ್ನು ಮಂತ್ರಿ ಮಾಡಬೇಕೆಂಬ ಬೇಡಿಕೆಯನ್ನು ಜಿ.ಟಿ ದೇವೇಗೌಡರು ಮುಂದಿಟ್ಟಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ವಿಜಯನಗರದಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿಯಲ್ಲಿಯೂ ಈ ಕುರಿತು ಚರ್ಚೆ ನಡೆದಿದೆ. ಹಳೆ ಮೈಸೂರು ಭಾಗದಲ್ಲಿರುವ ಪ್ರಬಲ ನಾಯಕರನ್ನು ಬಿಜೆಪಿಗೆ ಸೆಳೆಯುವಂತೆ ಅಮಿತ್ ಶಾ ಮತ್ತು ಜೆ.ಪಿ ನಡ್ಡಾ ರಾಜ್ಯ ನಾಯಕರಿಗೆ ಸೂಚನೆ ನೀಡಿದ್ದಾರೆ.
ಈಗಾಗಲೇ ಹಲವು ನಾಯಕರನ್ನು ಬಿಜೆಪಿಗೆ ಕರೆತರಲು ಮಾತುಕತೆಗಳು ನಡೆಯುತ್ತಿವೆ. ಇನ್ನು ಜಿ.ಟಿ ದೇವೇಗೌಡರು ಮೈಸೂರು, ಹುಣಸೂರು, ಕೆ.ಆರ್.ನಗರ ಮತ್ತು ಎಚ್.ಡಿ.ಕೋಟೆಯಲ್ಲಿ ಪ್ರಭಾವ ಹೊಂದಿದ್ದಾರೆ. ಹೀಗಾಗಿ ಅವರನ್ನು ಬಿಜೆಪಿಗೆ ಕರೆತಂದರೆ ಹಳೆ ಮೈಸೂರು ಭಾಗದಲ್ಲಿ ಬಿಜೆಪಿಗೆ ಹೊಸ ಶಕ್ತಿ ಸಿಗಲಿದೆ ಎಂದು ರಾಜ್ಯ ಬಿಜೆಪಿ ನಾಯಕರು ಕೇಂದ್ರ ವರಿಷ್ಠರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ. ಜಿ.ಟಿ ದೇವೇಗೌಡರ ಪುತ್ರ ಹರೀಶ್ಗೌಡರಿಗೆ ಬಿಜೆಪಿ ಟಿಕೆಟ್ ನೀಡುವ ಕುರಿತು ದೆಹಲಿ ವರಿಷ್ಠರು ತೀರ್ಮಾನ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.
ಅಪ್ಪ-ಮಗ ಇಬ್ಬರಿಗೂ ಟಿಕೆಟ್ ನೀಡಲು ದೆಹಲಿ ನಾಯಕರು ಒಲವು ತೋರಿದ್ದಾರೆ ಎನ್ನಲಾಗಿದ್ದು, ಈ ಕುರಿತು ಇನ್ನು ಯಾವುದೇ ಅಂತಿಮ ತೀರ್ಮಾನವನ್ನು ತೆಗೆದುಕೊಂಡಿಲ್ಲ.