ಬೆಂಗಳೂರು, ಜ. 22: ಜನಪರ ಧ್ವನಿಯೆತ್ತಿದ ಸಾಹಿತಿ, ಸಂಶೋಧಕ ಹಂ.ಪ. ನಾಗರಾಜಯ್ಯ ವಿರುದ್ಧ ಪೊಲೀಸ್ ಕ್ರಮಕೈಗೊಂಡ ರಾಜ್ಯ ಬಿಜೆಪಿ ಸರ್ಕಾರದ ನಡೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತೀವ್ರವಾಗಿ ಖಂಡಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರವನ್ನು ಟೀಕಿಸಿದರು ಎಂಬ ಏಕೈಕ ಕಾರಣಕ್ಕಾಗಿ ಹಂಪನಾ ಅವರನ್ನು ಮಂಡ್ಯ ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ನಡೆಸಿರುವುದು ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಹಾಗೂ ಕೀಚಕ ನಡೆಯ ಪ್ರತೀಕ ಎಂದು ಟೀಕಿಸಿದ್ದಾರೆ.
ಹಂಪನಾ ಅವರು ಈ ನಾಡು ಕಂಡ ಶ್ರೇಷ್ಠ ಭಾಷಾ ವಿಜ್ಞಾನಿ, ಸಂಶೋಧಕ ಹಾಗೂ ಎಲ್ಲಕ್ಕೂ ಮಿಗಿಲಾಗಿ ಚಿಂತಕ. ಅಂತಹವರ ಧ್ವನಿ ಅಡಗಿಸಲು ರಾಜ್ಯ ಸರಕಾರ ಮುಂದಾದದ್ದು ನಾಚಿಕೆಗೇಡಿನ ಸಂಗತಿ. ತಮ್ಮ ವಿರುದ್ಧ ಧ್ವನಿ ಎತ್ತುವ ರಾಜಕೀಯ ವಿರೋಧಿಗಳ ವಿರುದ್ಧ ಹಗೆತನ ಸಾಧಿಸುವ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಇದೀಗ ಸಾಹಿತಿಗಳನ್ನೂ ಆ ಪಟ್ಟಿಗೆ ಸೇರಿಸಿಕೊಂಡಿರುವುದು ದುರಂತದ ಸಂಗತಿ ಎಂದು ಅವರು ಛೇಡಿಸಿದರು.
ಅದು ಯಾವುದೇ ಸರ್ಕಾರವಿರಲಿ, ಅದರ ಜನವಿರೋಧಿ ನಡೆಯನ್ನು ಟೀಕಿಸುವ, ತಿದ್ದುವ, ತೀಡುವ ಹಕ್ಕನ್ನು ಈ ದೇಶದ ಪ್ರಜಾತಂತ್ರ ವ್ಯವಸ್ಥೆ, ಸಂವಿಧಾನ ಕಲ್ಪಿಸಿದೆ. ಆದರೆ ಸರ್ಕಾರಗಳು ತಮಗಿರುವ ಅಧಿಕಾರ ದುರ್ಬಳಕೆ ಮಾಡಿಕೊಂಡು, ಪೊಲೀಸ್ ಬಲದ ಮೂಲಕ ಸಾಹಿತಿಗಳು, ಬುದ್ಧಿಜೀವಿಗಳು, ಪ್ರಜ್ಙಾವಂತರ ಧ್ವನಿ ಅಡಗಿಸಲು ಹೊರಟಿರುವುದು ಖಂಡನೀಯ. ಸರ್ಕಾರ ತನ್ನ ಈ ವಕ್ರ ನಡೆಯನ್ನು ತಿದ್ದಿಕೊಳ್ಳದಿದ್ದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.