ಬೆಂಗಳೂರು ಆ 25 : ರಾಜ್ಯದಲ್ಲಿ ಕುಂಠಿತವಾಗಿರುವ ಕೈಮಗ್ಗ ನಿಗಮದ ಪುನಶ್ಚೇತನಕ್ಕೆ ಪೂರಕವಾಗಿ ತಕ್ಷಣವೇ ಅಬಿವೃದ್ದಿ ಯೋಜನೆ ರೂಪಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು ಹಾಗೆಯೇ ಕೈಮಗ್ಗ ನಿಗಮಕ್ಕೆ ಆರ್ಥಿಕ ಉತ್ತೇಜನ ಒದಗಿಸುವ ನಿಟ್ಟಿನಲ್ಲಿ ಸರ್ಕಾರದ ವಿವಿಧ ಇಲಾಖೆಗಳು ತಮ್ಮ ಅಗತ್ಯದ ಕನಿಷ್ಠ 25% ಗಳಷ್ಟು ವಸ್ತ್ರವನ್ನು ಕೈಮಗ್ಗ ನಿಗಮದಿಂದ ಖರೀದಿಸುವಂತೆ ಸುತ್ತೋಲೆ ಹೊರಡಿಸುವುದಾಗಿ ತಿಳಿಸಿದ್ದಾರೆ.
ನಿಗಮಕ್ಕೆ ಸಂಬಂಧಿಸಿದಂತೆ ವಾಣಿಜ್ಯ ಚಟುವಟಿಕೆಗಳನ್ನು ವಿಸ್ತರಣೆ ಮಾಡುವ ಮೂಲಕ ನಷ್ಟದಲ್ಲಿರುವ ನಿಗಮವನ್ನು ಸದೃಢಗೊಳಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ವಿನ್ಯಾಸಗಳ ಜೊತೆಗೆ ಒಪ್ಪಂದ ಮಾಡಿಕೊಂಡು ನಗರ ಪ್ರದೇಶಗಳಲ್ಲಿ ಮಾರುಕಟ್ಟೆ ವಿಸ್ತರಣೆ ಮಾಡುವಂತೆಯೂ ಗಮನ ಹರಿಸುವಂತೆ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಹಾಗೆಯೇ ವಿದ್ಯಾರ್ಥಿಗಳಿಗೆ ಸಮವಸ್ತ್ರ ಪೂರೈಕೆಯಲ್ಲಿ ನಿಗಮಕ್ಕೆ ಉಂಟಾದ 10 ಕೋಟಿ ರೂ. ನಷ್ಟದಲ್ಲಿ 5 ಕೋಟಿ ರೂ. ಗಳನ್ನು ಸರ್ಕಾರ ಭರಿಸಲಿದೆ ಎಂದು ತಿಳಿಸಿದ್ದಾರೆ. ಉಳಿದಂತೆ 5 ಕೋಟಿ ರೂ. ಗಳನ್ನು ನಿಗಮ ತನ್ನ ಚಟುವಟಿಕೆಗಳನ್ನು ವಿಸ್ತರಣೆ ಮಾಡಿಕೊಳ್ಳುವ ಮೂಲಕ ಭರಿಸುವಂತೆ ಹೇಳಿದ್ದಾರೆ. ಇದರಿಂದಾಗಿ ಕೈಮಗ್ಗ ಅಭಿವೃದ್ದಿ ಇನ್ನಷ್ಟು ಉತ್ತೇಜನ ನೀಡಿದಂತಾಗುತ್ತದೆ ಎಂದು ಅವರು ಹೇಳಿದರು.