ವಿಜಯನಗರ ಸೆ 18 : ಹರಪ್ಪನಹಳ್ಳಿ ತಾಲುಕಿನಲ್ಲಿ ಸುಮಾರು 15 ಸರ್ಕಾರಿ ಶಾಲೆಗಳಿಲ್ಲಿ ಒಬ್ಬರೂ ಕೂಡ ಶಿಕ್ಷಕರಿಲ್ಲದೆ ವಿದ್ಯಾರ್ಥಿಗಳು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ.
ತಾಲ್ಲೂಕಿನಲ್ಲಿ 15 ಶಾಲೆಗಳಲ್ಲಿ ಒಬ್ಬರೂ ಕೂಡ ಶಿಕ್ಷಕರಿಲ್ಲದಂತಾಗಿದೆ, ಈ ಶಾಲೆಗಳಿಗೆ ಬೇರೆ ಶಾಲೆಯ ಒಬ್ಬೊಬ್ಬ ಶಿಕ್ಷಕರನ್ನು ಹೊಂದಾಣಿಕೆಯ ಮೇಲೆ ನಿಯೋಜಿಸಲಾಗಿದೆ. ಜೊತೆಗೆ 41 ಶಾಲೆಗಳಲ್ಲಿ ಕೇವಲ ಒಬ್ಬೊಬ್ಬ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ
ವರದಿಯ ಪ್ರಕಾರ ತಾಲ್ಲೂಕಿನಲ್ಲಿ 268 ಸರ್ಕಾರಿ ಪ್ರಾಥಮಿಕ ಶಾಲೆಗಳಿದ್ದು, 39,589 ವಿದ್ಯಾರ್ಥಿಗಳಿದ್ದಾರೆ. 1,318 ಶಿಕ್ಷಕ ಹುದ್ದೆಗಳು ಮುಂಜೂರಾಗಿದ್ದು, 858 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. 460 ಹುದ್ದೆಗಳು ಖಾಲಿ ಇವೆ. 50 ಶಾಲೆಗಳಲ್ಲಿ ಬೋಧನಾ ಕೊಠಡಿಗಳ ಕೊರತೆ, 55 ಶಾಲೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. 80 ಶಾಲೆಗಳಲ್ಲಿ ಶೌಚಾಲಯವಿಲ್ಲ. 95 ಶಾಲೆಗಳಿಗೆ ಕಾಂಪೌಂಡ್ ಇಲ್ಲದೆ ವಿದ್ಯಾರ್ಥಿಗಳು ಸಾಕಷ್ಟು ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ.
ಜೊತೆಗೆ ಹರಪ್ಪನಹಳ್ಳಿ ತಾಲ್ಲೂಕಿನಲ್ಲಿ 25 ಸರ್ಕಾರಿ ಪ್ರೌಢಶಾಲೆಗಳಲ್ಲಿ 14,607 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 276 ಶಿಕ್ಷಕ ಹುದ್ದೆಗಳು ಮುಂಜೂರಾಗಿವೆ. ಆದರೆ, 209 ಶಿಕ್ಷಕರಿದ್ದಾರೆ. 67 ಹುದ್ದೆಗಳು ಖಾಲಿ ಇವೆ. 3 ಶಾಲೆಯಲ್ಲಿ ಕೊಠಡಿ, ಕುಡಿಯುವ ನೀರು, 6 ಕಡೆಗೆ ಶೌಚಾಲಯದ ಕೊರತೆಯಿದೆ. ಯಾವುದೇ ಶಾಲೆಯಲ್ಲೂ ಅಂಗವಿಕಲರಿಗಾಗಿ ಪ್ರತ್ಯೇಕ ಶೌಚಾಲಯ ಸೌಲಭ್ಯವೂವಿಲ್ಲ