ರಿಷಬ್ ಶೆಟ್ಟಿ(Rishab Shetty) ನಾಯಕನಾಗಿ ನಟಿಸಿರುವ ‘ಹರಿ ಕಥೆ ಅಲ್ಲ ಗಿರಿಕಥೆ’(Hari Kathe Alla Giri Kathe) ಸಿನಿಮಾ(Cinema) ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ರಿಷಬ್ ಈ ಸಿನಿಮಾದ ನಾಯಕ ಅಂದ ಮೇಲೆ, ಸಿನಿಮಾದಲ್ಲಿ ಹೊಸತನದ ಜೊತೆ ಒಂದು ಒಳ್ಳೆಯ ಕಂಟೆಂಟ್ ಇರೋದಂತೂ ಖಾತ್ರಿ. ಅದರಲ್ಲೂ ಈಗಾಗಲೇ ರಿಷಬ್ ಶೆಟ್ಟಿ ಮತ್ತು ಪ್ರಮೋದ್ ಶೆಟ್ಟಿ(Pramod Shetty) ಕಾಂಬಿನೇಷನ್ ಬೇರೆ ಸಿನಿಮಾಗಳಲ್ಲಿ ನೋಡಿರುವವರು ಇಷ್ಟಪಡದೇ ಇರಲು ಸಾಧ್ಯವೇ ಇಲ್ಲ ಬಿಡಿ.

ಇತ್ತೀಚಿನ ಕೆಲವು ವರ್ಷಗಳಿಂದ ರಿಷಬ್ ಕನ್ನಡ ಚಿತ್ರರಂಗದಲ್ಲಿ(Kannada Industry) ಸಕ್ರಿಯರಾಗಿ ಗುರುತಿಸಿಕೊಂಡಿರುವ ನಟ, ನಿರ್ದೇಶಕ(Director) ಹಾಗೂ ನಿರ್ಮಾಪಕ(Producer). ಆದರೆ ತಮ್ಮ ಸಿನಿಪಯಣದ ಆರಂಭದಲ್ಲಿ ಇವರು ನಿರ್ದೇಶಕರಾಗಬೇಕೆಂಬ ಕನಸು ಹೊತ್ತು ಹಲವಾರು ನಿರ್ಮಾಪಕರ ಮನೆ ಬಾಗಿಲಿಗೆ ಅಲೆದಿದ್ದರು. ಇಂತಹ ಒಬ್ಬ ನಿರ್ದೇಶಕನ ಕಥೆಯೇ ‘ಹರಿಕಥೆ ಅಲ್ಲ ಗಿರಿಕಥೆ’. ಸಿನಿಮಾ ನಿರ್ದೇಶಕನಾಗಲು ಶತಪ್ರಯತ್ನ ಪಟ್ಟರೂ, ನಿರ್ದೇಶಿಸುವ ಕನಸನ್ನು ನನಸು ಮಾಡಿಕೊಳ್ಳಲು ಸಾಧ್ಯವಾಗದೇ ಹೋದವರಿಗೆ ಈ ಸಿನಿಮಾವನ್ನು ಅರ್ಪಿಸಲಾಗಿದೆ.
ಸಿನಿಮಾ ಕಥೆಯ ಎಳೆ ಹೀಗಿದೆ, ಇದು ಎರಡು ತಲೆಮಾರಿನ ಕತೆ. ಸಿನಿಮಾ ನಿರ್ದೇಶನ ಮಾಡಲು ಸಾಧ್ಯವಾಗದೇ ಹೋದ ಅಪ್ಪ, ಸಿನಿಮಾ ನಿರ್ದೇಶನ ಮಾಡಲು ಹೆಣಗಾಡುತ್ತಿರುವ ಮಗ. ಇವರಿಬ್ಬರ ಕನಸು ಸಾಕಾರದಲ್ಲಿ ಜೊತೆಯಾಗುವ ಮಂದಿ ಈ ಸಿನಿಮಾವನ್ನು ಮುಂದೆ ತೆಗೆದುಕೊಂಡು ಹೋಗುತ್ತಾರೆ. ಕತೆ ಸ್ವಲ್ಪ ಸರಳವಾಗಿದೆ ಎನಿಸಿದರೂ, ಪಾತ್ರಧಾರಿಗಳ ಬದುಕಿನ ಸಂಕೀರ್ಣತೆ ಸಿನಿಮಾದಲ್ಲಿ ಅಡಗಿದೆ. ಚಿತ್ರಕಥೆ ಕಟ್ಟಿರುವ ರೀತಿ ಸೊಗಸಾಗಿದೆ, ಆರಂಭದಿಂದಲೇ ವಿಡಂಬನೆ ಮತ್ತು ಹಾಸ್ಯದ ಜಾಡು ಹಿಡಿದೇ ಸಾಗುವ ಸಿನಿಮಾ ಪ್ರೇಕ್ಷಕರ ಮುಖದಲ್ಲಿ ನಗು ತರಿಸುತ್ತದೆ.

ಜೊತೆಗೆ ಚಿತ್ರರಂಗದಲ್ಲಿ ಹೆಸರು ಮಾಡಬೇಕು ಎನ್ನುವ ಹಂಬಲ ಹೊತ್ತು ಬಂದವರು ಪಡುವ ಕಷ್ಟದ ಬಗ್ಗೆ ಹೇಳುವಾಗ ವಿಷಾದ ಮೂಡುತ್ತದೆ. ಗಿರಿಕೃಷ್ಣ ಅವರು ನಿರ್ದೇಶನ ಮಾಡಿರುವ ಈ ಸಿನಿಮಾವನ್ನು, ಸಂದೇಶ್ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಸಂದೇಶ್ ನಾಗರಾಜ್ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ಸಂಯೋಜಿಸಿದ್ದಾರೆ. ಹರಿಕಥೆ ಅಲ್ಲ ಗಿರಿಕಥೆ ಸಿನಿಮಾದ ಕಥೆ ಹಾಗೂ ಪಾತ್ರವರ್ಗದಲ್ಲಿ ಹೊಸತನವಿದೆ. ಹೊನ್ನವಳ್ಳಿ ಕೃಷ್ಣ, ರಚನಾ ಇಂದರ್, ತಪಸ್ವಿನಿ ಪೂಣಚ್ಚ,
ದೀಪಕ್ ರೈ ಪಾಣಾಜೆ, ಕಿರಣ್, ರಘು ಪಾಂಡೇಶ್ವರ್ ಮುಖ್ಯ ತಾರಾಗಣದಲ್ಲಿದ್ದಾರೆ. ಒಂದೊಳ್ಳೆ ಸಂದೇಶದ ಜೊತೆಗೆ ಪ್ರೇಕ್ಷಕರಿಗೆ ಭರಪೂರ ಮನರಂಜನೆಯೂ ಈ ಚಿತ್ರದಲ್ಲಿದೆ.
- ಪವಿತ್ರ ಸಚಿನ್