ಹಾಸನ : ಚಿಕ್ಕಮಗಳೂರಿನಿಂದ(Chikkamagaluru) ಹಾಸನ(Hassan) ಹಾದು ಬೆಂಗಳೂರಿಗೆ(Bengaluru) ತಲುಪಬೇಕಿದ್ದ ಕೆಎಸ್ಆರ್ಟಿಸಿ(KSRTC) ಬಸ್ ಅಪಘಾತಕ್ಕೀಡಾಗಿದೆ. ಹಾಸನ ಜಿಲ್ಲೆಯ ಬೇಲೂರು(Belur) ತಾಲೂಕಿನ ಕಲ್ಕೆರೆ ಗ್ರಾಮದ ಸಮೀಪ ಬರುತ್ತಿದ್ದಂತೆ ಎದುರಿಗೆ ಆಲ್ಟೋ ಕಾರು ಬಂದಿದೆ. ಚಾಲಕನಿಗೆ ತಪ್ಪಿಸಲಾಗದೆ ಬಸ್ ಮತ್ತು ಕಾರು ಮುಖಾಮುಖಿ ಹೊಡೆದ ಪರಿಣಾಮ ಬಸ್ ಮತ್ತು ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅಪಘಾತಕ್ಕೆ ಐವರು ವಿದ್ಯಾರ್ಥಿಗಳು ಬಲಿಯಾಗಿದ್ದಾರೆ.

ಹಾಸನ-ಬೇಲೂರು ಮುಖ್ಯರಸ್ತೆಯಲ್ಲಿ ಬರುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಕಾರಿಗೆ ರಭಸವಾಗಿ ಗುದ್ದಿದ ಪರಿಣಾಮ ಕಾರಿನಲ್ಲಿದ್ದ ಐವರು ವಿದ್ಯಾರ್ಥಿಗಳಲ್ಲಿ ನಾಲ್ವರು ಸ್ಥಳದಲ್ಲೇ ಸಾವನಪ್ಪಿದ್ದಾರೆ. ಮತ್ತೊಬ್ಬ ಯುವಕನಿಗೆ ಗಂಭೀರ ಗಾಯಗಳಾಗಿದ ಪರಿಣಾಮ, ಕೂಡಲೇ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಆದರೆ, ಯುವಕ ದಾರಿ ಮಧ್ಯೆಯೇ ಕೊನೆಯುಸಿರೆಳೆದಿದ್ದಾನೆ.

ಮೃತ ದುರ್ದೈವಿಗಳನ್ನು ಬೇಲೂರಿನ ಮುಹಮ್ಮದ್ ಕೈಫ್(20), ಮುಹಮ್ಮದ್ ಹಸನ್(20), ರಿಹಾನ್(18), ಜಿಲಾನಿ(19) ಅಕ್ಮಲ್(20) ಎಂದು ಪತ್ತೆಹಚ್ಚಲಾಗಿದೆ. ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿಗಳ ದೇಹವನ್ನು ಬೇಲೂರು ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಶವಾಗಾರದ ಕೊಠಡಿಯಲ್ಲಿ ಇರಿಸಲಾಗಿದೆ ಎಂದು ವರದಿ ತಿಳಿಸಿದೆ. ಈ ಪ್ರಕರಣ ಬೇಲೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.