ದೇವರಿದ್ದಾನಾ? ಗೊತ್ತಿಲ್ಲ, ದೆವ್ವಗಳಿವೆಯಾ? ತಿಳಿದಿಲ್ಲ. ನಮ್ಮಲ್ಲಿ ಯಾರೂ ಕೂಡಾ ದೇವರನ್ನು ನೋಡಿಲ್ಲ. ಆದರೆ ದೇವರ ಬಗ್ಗೆ ನಮ್ಮಲ್ಲಿರುವ ಭಕ್ತಿ ಮಾತ್ರ ನಿಶ್ಚಲವಾದುದು.

ದೇವರನ್ನು ಕಾಣದೆಯೇ ದೇವರಿದ್ದಾನೆ ಎಂದು ನಂಬುವಾಗ, ಭೂತ, ಪ್ರೇತವನ್ನು ಯಾಕೆ ನಂಬಬಾರದು ಎನ್ನುವ ವಾದ ಕೆಲವರದ್ದು. ಸಾಮಾನ್ಯವಾಗಿ ನಾವೆಲ್ಲರೂ ಇಂತಹದ್ದೇ ವಿಚಿತ್ರ ಘಟನೆಗಳ ಬಗ್ಗೆ ಚರ್ಚೆ ಮಾಡುತ್ತಲೇ ಇರುತ್ತೇವೆ. ದೆವ್ವ ಭೂತಗಳ ಕಥೆಗೆ ಪುಷ್ಟಿ ನೀಡುವಂತೆ, ಭಾರತದಲ್ಲಿ ಅನೇಕ ಭಯಾನಕ ಸ್ಥಳಗಳಿವೆ. ಅವುಗಳಲ್ಲಿ ಒಂದು ಹೈದರಾಬಾದ್ನಲ್ಲಿರುವ ಈ ಸ್ಥಳ. ಈ ಒಂದು ಸ್ಥಳದಲ್ಲಿ ಜನರು ರಾತ್ರಿ ಬಿಡಿ, ಹಗಲಿನಲ್ಲಿ ಓಡಾಡುವುದಕ್ಕೂ ಹೆದರುತ್ತಾರೆ.
ನಾವೀಗ ಹೇಳುತ್ತಿರುವುದು ಹೈದರಾಬಾದ್‌ನ(Hyderabad) ಕುಂದನ್‌ಬಾಗ್(Kundanbag) ಬಗ್ಗೆ. 2002ರಿಂದ ಈ ಸ್ಥಳವು ಬಹಳ ಚರ್ಚೆಗೆ ಒಳಗಾಗಿದೆ. ಹಲವಾರು ವಿಚಿತ್ರ ಘಟನೆಗಳು ನಡೆದ ನಂತರ ಈ ಸ್ಥಳ ಹೈದರಾಬಾದ್‌ನಲ್ಲಿರುವ ಭಯಾನಕ ಸ್ಥಳಗಳ ಪಟ್ಟಿಗೆ ಸೇರಿಕೊಂಡಿದೆ. ಈಗ ಜನರಿಗೆ ಇಲ್ಲಿ ಪ್ರವೇಶ ನಿಷೇಧಿಸಲಾಗಿದೆ.
ಇಷ್ಟೆಲ್ಲಾ ಭಯ ಹುಟ್ಟಿಸಿರುವ ಈ ಜಾಗದ ಹಿಂದೆ ಒಂದು ಕಥೆಯಿದೆ. ಕುಂದನ್‌ನಗರದ ಈ ಕಾಲೋನಿಯಲ್ಲಿ ತಂದೆ ತಾಯಿ ಹಾಗೂ ಇಬ್ಬರು ಮಕ್ಕಳು ವಾಸಿಸುತ್ತಿದ್ದರು. ಒಂದು ದಿನ ಈ ಮನೆಯ ಮುಖ್ಯಸ್ಥ, ಆ ಇಬ್ಬರು ಮಕ್ಕಳ ತಂದೆ ಕಾಣೆಯಾಗುತ್ತಾರೆ.

ಮತ್ತೆ ಕಾಣಿಸಲೇ ಇಲ್ಲ. ಪಕ್ಕದ ಮನೆಯವರ ಪ್ರಕಾರ ಈ ಮನೆಯಲ್ಲಿದ್ದ ತಾಯಿ ಹಾಗೂ ಇಬ್ಬರು ಮಕ್ಕಳು ವಿಚಿತ್ರ ಸ್ವಭಾವವನ್ನು ಹೊಂದಿದ್ದರು. ಮಕ್ಕಳು ಯಾವಾಗಲೂ ರಕ್ತವನ್ನು ತುಂಬಿದ ಬಾಟಲ್‌ನಿಂದ ಆಡುತ್ತಿದ್ದರು. ಪ್ರತಿದಿನ ಮನೆಯೊಳಗಿನಿಂದ ವಿಚಿತ್ರ ಶಬ್ಧ ಕೂಡಾ ಬರುತ್ತಿತ್ತು. ಒಂದು ದಿನ ಕಳ್ಳನೊಬ್ಬ ಈ ಮನೆಯೊಳಗೆ ನುಗ್ಗಿ ಮನೆಯೊಳಗಿನ ದೃಶ್ಯ ನೋಡಿ ಆತ ಗಾಬರಿಗೊಂಡ. ಮನೆಯೊಳಗೆ ಮೂರು ಮೃತದೇಹ ಬಿದ್ದಿದ್ದವು. ಪೊಲೀಸರು ಬಂದು ಆತನನ್ನು ಬಂಧಿಸಿದರು. ಆಗ ಆತ ಕಳ್ಳತನ ಮಾಡಲು ಬಂದಿದ್ದುದ್ದಾಗಿ ತಿಳಿಸಿದ್ದಾನೆ.
ಪೊಲೀಸರು ಮೂರು ಮೃತದೇಹವನ್ನು ವಶಕ್ಕೆ ಪಡೆದು ಪೋಸ್ಟ್‌ಮಾರ್ಟಮ್ ಮಾಡಿಸಿದಾಗ ತಿಳಿದು ಬಂದಿದ್ದೇನೆಂದರೆ ಈ ಮೂವರು ಸಾವನ್ನಪ್ಪಿ ಸುಮಾರು ೬ ತಿಂಗಳುಗಳೇ ಕಳೆದಿದೆ! ನೆರೆಮನೆಯವರು ಈ ವಿಷಯ ಕೇಳಿ ಗಾಬರಿಗೊಳಗಾದರು. ಹಾಗಾದರೆ ಮನೆ ಹೊರಗೆ ಆಡುತ್ತಿದ್ದ ಮಕ್ಕಳು ಯಾರು?ಮನೆಯೊಳಗೆ ಹಾಡು ಹಾಡುತ್ತಿದ್ದುದು ಯಾರು? ಕುಂದನ್‌ಬಾಗ್‌ನ ಈ ಕಥೆಯ ಬಗ್ಗೆ ಅನೇಕರ ವಿಭಿನ್ನ ಅಭಿಪ್ರಾಯಗಳು ಕೇಳಿ ಬರುತ್ತಿವೆ. ಕೆಲವರು ಈ ಮನೆಯನ್ನು ಬೇರೆ ಯಾರು ಕೊಳ್ಳಬಾರದೆಂದು ಈ ರೀತಿ ಕಥೆಕಟ್ಟಿ ಹೇಳಲಾಗುತ್ತಿದೆ ಎಂದರೆ, ಇನ್ನೂ ಕೆಲವರು ಇಲ್ಲಿ ಭೂತ, ಪ್ರೇತಗಳಿವೆ. ಅನೇಕ ಚಿತ್ರ-ವಿಚಿತ್ರ ಘಟನೆಗಳು ಇಲ್ಲಿ ನಡೆದಿವೆ ಎನ್ನುತ್ತಾರೆ.

ಇದರ ರಹಸ್ಯ ಏನು ಎನ್ನುವುದು ಯಾರಿಗೂ ತಿಳಿದಿಲ್ಲ. ಇದೊಂದು ವಿವಾದಿತ ಸಂಪತ್ತಾ ಅಥವಾ ಪ್ರೇತಾತ್ಮದ ಬಂಗ್ಲೆಯ ಅನ್ನೋದು ಇನ್ನೂ ನಿಗೂಢ. ಆದರೆ ಈ ಮನೆಯ ಹತ್ತಿರ ಆಗಾಗ ಏನಾದರೊಂದು ಸಮಸ್ಯೆ ಉಂಟಾಗುತ್ತಿರುವುದಂತೂ ಸತ್ಯ. ತನ್ನ ನಿಗೂಢತೆಯಿಂದ ಕುಂದನ್‌ಬಾಗ್ ಎಸ್ಟೇಟ್ ಇಂದಿಗೂ ಬೇಧಿಸಲಾಗದ ರಹಸ್ಯವಾಗಿಯೇ ಉಳಿದಿದೆ.