ಬೆಂಗಳೂರು ಜ 22 : ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠರಾದ ಎಚ್. ಡಿ ದೇವೇಗೌಡ ಅವರಿಗೆ ಕೊರೋನಾ ಪಾಸಿಟಿವ್ ಕಾಣಿಸಿಕೊಂಡಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಮೊದಲು ಕೂಡ ಹೆಚ್.ಡಿ. ದೇವೇಗೌಡ ಅವರಿಗೆ ಕೊರೊನಾ ಎರಡನೇ ಅಲೆಯಲ್ಲಿ ಕೊರೊನಾ ಪಾಸಿಟಿವ್ ಸೋಂಕು ತಗಲಿದ್ದು, ದೃಢವಾಗಿತ್ತು. ಬಳಿಕ ಶೀಘ್ರ ಚಿಕಿತ್ಸೆಯಿಂದ ಅವರು ಗುಣಮುಖರಾಗಿ ಮತ್ತೆ ಎಂದಿನಂತೆ ತಮ್ಮ ಕೆಲಸ, ಕಾರ್ಯಗಳಿಗೆ ಸಕ್ರಿಯರಾದರು. ಆದರೆ ಈಗ ಮತ್ತೊಮ್ಮೆ ಕೊರೊನಾ ಮೂರನೇ ಅವಧಿಯಲ್ಲಿ ದೇವೇಗೌಡ ಅವರಿಗೆ ಪಾಸಿಟಿವ್ ಕಾಣಿಸಿಕೊಂಡಿದೆ. ನಿನ್ನೆ ರಾತ್ರಿ ಬೆಂಗಳೂರಿನ ಮಣಿಪಾಲ್ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಕಳೆದ ಒಂದೆರಡು ದಿನಗಳಿಂದ ವಿಪರೀತ ಕೆಮ್ಮು ಕಾಣಿಸಿಕೊಂಡ ಬೆನ್ನಲ್ಲೇ ಇನ್ನೂ ದೇವೆಗೌಡ ಅವರು ಮುನ್ನೆಚ್ಚರಿಕೆಯಿಂದ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿದ್ದರು. ಈ ವೇಳೆ ಕೊರೊನ ಸೋಂಕಿನಲ್ಲಿ ಪಾಸಿಟಿವ್ ಆಗಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆ ವೈದ್ಯರು ದೇವೇಗೌಡ ಅವರಿಗೆ ಸೂಕ್ತ ಚಿಕಿತ್ಸೆಯನ್ನು ನೀಡುತ್ತಿದ್ದಾರೆ.
ಕಳೆದ ಒಂದು ವಾರದ ಹಿಂದೆಯಷ್ಟೇ ಕುಮಾರಸ್ವಾಮಿಯವರ ಪತ್ನಿ ಅನಿತಾ ಕುಮಾರಸ್ವಾಮಿ ಅವರಿಗೂ ಕೊರೊನ ಸೋಂಕು ತಗುಲಿತ್ತು. ತಮ್ಮ ಬೆಂಗಳೂರಿನಲ್ಲಿರುವ ನಿವಾಸದಲ್ಲಿಯೇ ಅನಿತಾ ಕುಮಾರಸ್ವಾಮಿಯವರು ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದರು. ಈಗ ಕುಟುಂಬದ ಹಿರಿಯ ವ್ಯಕ್ತಿಗೆ ಕೋವಿಡ್ ಪಾಸಿಟಿವ್ ಬಂದಿರುವುದು ಬೇಸರ ತಂದಿದೆ. ಈ ಕುರಿತು ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿಯವರು ಪ್ರತಿಕ್ರಿಯಿಸಿ, ಮಾಜಿ ಪ್ರಧಾನಿ ದೇವೇಗೌಡ ಅವರ ಜತೆ ಮಾತನಾಡಿದ್ದೇನೆ. ಅವರು ಶೀಘ್ರ ಗುಣಮುಖರಾಗಲಿ ಎಂದು ನಾನು ಹಾರೈಸುತ್ತೇನೆ ಎಂದು ಹೇಳಿದರು. ಬೊಮ್ಮಾಯಿಯವರ ಬೆನ್ನಲ್ಲೇ, ಮಾಜಿ ಮುಖ್ಯಮಂತ್ರಿಗಳಾದ ಬಿ. ಎಸ್ ಯಡಿಯೂರಪ್ಪ ಅವರು ಟ್ವೀಟ್ ಮಾಡುವ ಮೂಲಕ ದೇವೇಗೌಡ ಅವರಿಗೆ ಕೊರೋನಾ ಸೋಂಕು ತಗಲಿರುವುದು ಮನಸ್ಸಿಗೆ ಬೇಸರದ ಸಂಗತಿಯಾಗಿದೆ. ಕೊರೋನಾ ವಿರುದ್ಧ ಗೆದ್ದು, ಶೀಘ್ರ ಗುಣಮುಖರಾಗಿ ಬರಲಿ ಎಂದು ಹಾರೈಸಿದ್ದಾರೆ. ಇನ್ನು ವಿಧಾನ ಪರಿಷತ್ ಸದಸ್ಯರಾದ ಶರವಣ್ಣ ಕೂಡ ದೇವೆಗೌಡ ಅವರು ಕೊರೊನಾದ ವಿರುದ್ಧ ಗೆದ್ದು ಬರಲಿ ಎಂದು ಆಶಿಸುತ್ತೇನೆ ಎಂದು ತಮ್ಮ ಟ್ವೀಟ್ನಲ್ಲಿ ತಿಳಿಸಿದ್ದಾರೆ. ಕೊರೊನಾ ಯಾರಿಗೂ ಬಿಟ್ಟಿಲ್ಲ ಎಂಬುದನ್ನು ಹಲವು ರಾಜಕೀಯ ವ್ಯಕ್ತಿಗಳು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸುವಾಗ ಒತ್ತಿ ಹೇಳುತ್ತಿದ್ದಾರೆ.