ಕಾಂಗ್ರೆಸ್‍ನವರೇ(Congress) ನನ್ನನ್ನು ಬಲವಂತವಾಗಿ ತುಮಕೂರು(Tumukuru) ಲೋಕಸಭಾ ಕ್ಷೇತ್ರಕ್ಕೆ(Loksabha Kshetra) ತಂದು ಚುನಾವಣೆಗೆ ನಿಲ್ಲಿಸಿ, ಸೋಲಿಸಿದ್ರು.

ಆ ಮೂಲಕ ಹಾಲಿ ಸಂಸದರಾಗಿದ್ದ ಎಸ್.ಪಿ ಮುದ್ದಹನುಮೇಗೌಡರನ್ನು ರಾಜಕೀಯವಾಗಿ ಕೊಂದರು ಎಂದು ಎಚ್.ಡಿ ದೇವೇಗೌಡರು ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು. ‘ಜನತಾ ಜಲಧಾರೆ’ ರಥಯಾತ್ರೆ ತುಮಕೂರಿಗೆ ಆಗಮಿಸಿದ ವೇಳೆ ಜೆಡಿಎಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜಕೀಯವಾಗಿ ಎಸ್.ಪಿ ಮುದ್ದಹನುಮೇಗೌಡರನ್ನು ಕೊಲ್ಲಲ್ಲು ನನ್ನನ್ನು ತುಮಕೂರಿಗೆ ತಂದು ಚುನಾವಣೆಗೆ ನಿಲ್ಲಿಸಿದ್ರು.
ಇತ್ತೀಚೆಗೆ ‘ನಮ್ಮ ಜಿಲ್ಲೆಯ ಒಕ್ಕಲಿಗ ನಾಯಕರೇ ಸಾಕಷ್ಟು ಪ್ರಯತ್ನ ಮಾಡಿ, ದೇವೇಗೌಡರನ್ನು ತಂದು ತುಮಕೂರಿನಲ್ಲಿ ಚುನಾವಣೆಗೆ ಸ್ಪರ್ಧಿಸುವಂತೆ ಮಾಡಿದರು’ ಎಂದು ಸ್ವತಃ ಮುದ್ದಹನುಮೇಗೌಡರು ಮಧುಗಿರಿಯಲ್ಲಿ ಹೇಳಿದ್ದಾರೆ. ಅವರನ್ನು ರಾಜಕೀಯವಾಗಿ ಮುಗಿಸಲು ನನ್ನನ್ನು ಬಳಸಿಕೊಂಡರು ಎಂದು ದೇವೇಗೌಡರು ಟೀಕಿಸಿದರು. ಇನ್ನು ಪ್ರಾರಂಭದಲ್ಲಿ ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ನನಗೆ ಆಹ್ವಾನ ನೀಡಿದಾಗ ನಾನು ನಿರಾಕರಿಸಿದ್ದೆ. ಮುದ್ದಹನುಮೇಗೌಡರು ಕೂಡಾ ನನ್ನನ್ನು ಭೇಟಿ ಮಾಡಿ ಸ್ಪರ್ಧಿಸದಂತೆ ಮನವಿ ಮಾಡಿದ್ದರು. ಆದರೆ ಕಾಂಗ್ರೆಸ್‍ನವರು ನನ್ನನ್ನು ಒತ್ತಾಯ ಮಾಡಿ ತುಮಕೂರಿನಿಂದ ಚುನಾವಣೆಗೆ ನಿಲ್ಲುವಂತೆ ಮಾಡಿದರು.

ನನ್ನನ್ನು ಸೋಲಿಸುವ ಪ್ಲ್ಯಾನ್ ಮೊದಲೇ ಸಿದ್ದವಾಗಿತ್ತು. ಹೀಗಾಗಿ ವ್ಯವಸ್ಥಿತವಾಗಿ ನನ್ನನ್ನು ಸೋಲಿಸಿದರು. ಇನ್ನು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ಒಳ್ಳೆಯ ಆಡಳಿತ ನಡೆಸಲು ಕಾಂಗ್ರೆಸ್-ಬಿಜೆಪಿ ಬಿಡಲಿಲ್ಲ. ಕಾಂಗ್ರೆಸ್‍ನವರು ಕುಮಾರಸ್ವಾಮಿ ಸರ್ಕಾರವನ್ನು ಬೀಳಿಸಿಲ್ಲ ಎಂದು ಜಿ. ಪರಮೇಶ್ವರ್ ಅವರು ಹೇಳುತ್ತಿದ್ದಾರೆ. ಹಾಗಾದ್ರೆ ಇದೇ ಮಾತನ್ನು ಸಿದ್ದಗಂಗಾ ಶ್ರೀಗಳ ಗದ್ದುಗೆ ಮೇಲೆ ಪ್ರಮಾಣ ಮಾಡಿ ಹೇಳಲು ಸಿದ್ದರಿದ್ದಾರಾ? ಎಂದು ಪ್ರಶ್ನಿಸಿದರು.
ಇನ್ನು ಜೆಡಿಎಸ್ ಪಕ್ಷ ‘ಜನತಾ ಜಲಧಾರೆ’ ಎನ್ನುವ ರಥಯಾತ್ರೆಯನ್ನು ಹಳೆ ಮೈಸೂರು ಭಾಗದ ಜಿಲ್ಲೆಗಳಲ್ಲಿ ನಡೆಸುತ್ತಿದೆ. ಜೆಡಿಎಸ್ ಪಕ್ಷ ಸಂಘಟನೆ ದೃಷ್ಟಿಯಲ್ಲಿಟ್ಟುಕೊಂಡು ಮುಂಬರುವ ವಿಧಾನಸಭಾ ಚುನಾವಣೆಗೆ ತಯಾರಿ ನಡೆಸಿದೆ.