ಶೋಭಾಯಾತ್ರೆಯ ಹೆಸರಿನಲ್ಲಿ ಇನ್ನೊಂದು ಸಮುದಾಯದವರು ವಾಸಿಸುತ್ತಿರುವ ಬೀದಿಗಳಲ್ಲಿ, ರಸ್ತೆಗಳಲ್ಲಿ, ಅವರ ಪ್ರಾರ್ಥನಾ ಮಂದಿರದ ಮುಂದೆ ಡಿಜೆ ಹಾಕಿಕೊಂಡು ಸಾವಿರಾರೂ ಜನರು 15-20 ನಿಮಿಷಗಳ ಕಾಲ ಕುಣಿಯುವುದು ಮತ್ತು ಕೇಕೆ ಹಾಕುವುದು ಬೇಡ ಎಂದು ಜೆಡಿಎಸ್ ನಾಯಕ(JDS Leader) ಎಚ್.ಡಿ.ಕುಮಾರಸ್ವಾಮಿ(HD Kumarswamy) ಸಲಹೆ ನೀಡಿದ್ದಾರೆ.

ಶ್ರೀರಾಮನ ಹೆಸರಿನಲ್ಲಿ ಶೋಭಾಯಾತ್ರೆ ಮಾಡಲು ನನ್ನ ಬೆಂಬಲವಿದೆ. ಆದರೆ ಶೋಭಾಯಾತ್ರೆಯನ್ನು ಹಿಂದೂಗಳು ಹೆಚ್ಚಾಗಿ ವಾಸಿಸುವ ಬೀದಿಗಳಲ್ಲಿ ಮಾಡಿ. ಅಲ್ಲೆಲ್ಲಾ ಅರ್ಧ ಗಂಟೆ ಸಾಲದಿದ್ದರೆ, ಒಂದು ಗಂಟೆ ಮಾಡಿ. ಅದಕ್ಕೆ ನನ್ನ ಬೆಂಬಲವಿದೆ. ಎಲ್ಲರೂ ಸೇರಿ ರಾಮನ ಸ್ಮರಣೆ ಮಾಡೋಣ. ಪ್ರತಿಯೊಬ್ಬರ ಹೃದಯದಲ್ಲಿಯೂ ಆ ರಾಮನು ಚಿರಸ್ಥಾಯಿಯಾಗಿ ನಿಲ್ಲಬೇಕು ಎಂಬುದೇ ನನ್ನ ಆಶಯ ಎಂದು ಟ್ವೀಟ್(Tweet) ಮಾಡಿದ್ದಾರೆ. ಈಗ ಒಂದು ಸಮುದಾಯದ ಜನರು ಉಪವಾಸದಲ್ಲಿದ್ದಾರೆ. ಅವರ ಶಾಂತಿಗೆ ಭಂಗ ತರುವುದು ಬೇಡ.
ಶೋಭಾಯಾತ್ರೆ ಹೆಸರಿನಲ್ಲಿ ಅವರ ಬಡಾವಣೆಗಳಿಗೆ ಹೋಗಿ ಶಾಂತಿಗೆ ಭಂಗ ತರುವುದು ಬೇಡ. ಈ ರೀತಿಯ ಕೃತ್ಯಗಳಿಗೆ ಪೋಲಿಸ್ ಇಲಾಖೆ ಅವಕಾಶ ಮಾಡಿಕೊಡಬಾರದು ಎಂದು ಆಯಾ ಜಿಲ್ಲೆಗಳ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡುತ್ತೇನೆ. ಇನ್ನು ಶ್ರೀರಾಮಚಂದ್ರ ಮಹಾಪ್ರಭು ನಮ್ಮೆಲ್ಲರ ಆರಾಧ್ಯ ದೈವ. ಮೌಲ್ಯಗಳ ದಿವ್ಯ ಬೆಳಕು ತೋರಿದ ಮಹಾಪುರುಷ. ಹೀಗಾಗಿಯೇ ರಾಮರಾಜ್ಯವೂ ಶಾಂತಿಯ ತೋಟವಾಗಿತ್ತು. ಹೀಗಾಗಿ ನಾವೆಲ್ಲರೂ ಶ್ರದ್ದೆಯಿಂದ ಭಕ್ತಿಪೂರ್ವಕವಾಗಿ ರಾಮನನ್ನು ಪೂಜಿಸೋಣ ಎಂದು ಮನವಿ ನೀಡಿದರು.