ಬೆಂಗಳೂರು,ಜ. 30: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಚಿತ್ರ ಬಿಡುಗಡೆಗೆ ಟಾಲಿವುಡ್ ನಲ್ಲಿ ಅಡ್ಡಿಯಾಗುರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಿಚ್ಚ ಸುದೀಪ್, ನನ್ನ ಸಿನಿಮಾವನ್ನು ನಾನು ಕಾಪಾಡಿಕೊಂಡು ಬಂದಿದ್ದೇನೆ, ಅವರ ಸಿನಿಮಾವನ್ನು ಕಾಪಾಡಿಕೊಳ್ಳುವಷ್ಟು ತಾಕತ್ತು ದೇವರು ಅವರಿಗೂ ಕೊಟ್ಟಿದ್ದಾನೆ ಎಂದಿದ್ದಾರೆ.
ಸ್ಯಾಂಡಲ್‍ವುಡ್ ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ಕನ್ನಡಚಿತ್ರರಂಗಕ್ಕೆ ಪಾದರ್ಪಣೆ ಮಾಡಿ ಇಂದಿಗೆ 25 ವರ್ಷ ತುಂಬಿದೆ. ಈ ವೇಳೆ ಟಾಲಿವುಡ್ ನಲ್ಲಿ ನಟ ದರ್ಶನ್ ಅಭಿನಯದ ರಾಬರ್ಟ್ ಚಿತ್ರ ಬಿಡುಗಡೆ ಅಡ್ಡಿ ವಿಚಾರವಾಗಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಿಚ್ಚ ಸುದೀಪ್, ಅವರ ಸಿನಿಮಾ ಬಗ್ಗೆ ಮಾತನಾಡುವುದು ಸರಿಯಲ್ಲ. ನನ್ನ ಸಿನಿಮಾಗಳಿಗೆ ಯಾವುದೇ ಅಡ್ಡಿಯಾಗುತ್ತಿಲ್ಲ. ನಮ್ಮ ಸಿನಿಮಾಗಳು ಭದ್ರವಾಗಿವೆ ಎಂದು ಅವರು ತಿಳಿಸಿದರು.