ಕೊತ್ತಂಬರಿ ಸೊಪ್ಪು(Coriander Leaves) ಕೇವಲ ಅಡುಗೆಗೆ ಮಾತ್ರ ಬಳಸುತ್ತೇವೆ ಎಂದುಕೊಂಡರೆ ಅದು ತಪ್ಪು.
ಹಲವಾರು ಆಹಾರ ಪದಾರ್ಥಗಳ ರುಚಿಯನ್ನು ಹೆಚ್ಚಿಸುವ ಕೊತ್ತಂಬರಿ ಸೊಪ್ಪು ಒಂದು ಪರಿಣಾಮಕಾರಿ ಗಿಡಮೂಲಿಕೆಯೂ ಆಗಿದ್ದು, ಹಲವಾರು ಆರೋಗ್ಯಕಾರಿ ಪ್ರಯೋಜನಗಳನ್ನು ಕೂಡ ಹೊಂದಿದೆ.
ಕೊತ್ತಂಬರಿ ಸೊಪ್ಪಿನಲ್ಲಿ ಖನಿಜಗಳು, ಥಿಯಮೈನ್, ವಿಟಮಿನ್ ಸಿ, ರೈಬೊಫ್ಲವಿನ್, ರಂಜಕ, ಕ್ಯಾಲ್ಸಿಯಂ, ಪ್ರೊಟೀನ್, ಕೊಬ್ಬು, ನಾರು ಮತ್ತು ನೀರಿನ ಅಂಶ ಹೆಚ್ಚಾಗಿರುತ್ತದೆ.

ಕೊತ್ತಂಬರಿ ಸೊಪ್ಪಿನಲ್ಲಿ ಮೆದುವಾದ ಮೆಣಸಿನಂತಹ ರುಚಿಯಿದೆ, ಇದು ಆಹಾರಕ್ಕೆ ಅದ್ಭುತ ರುಚಿಯನ್ನು ನೀಡುತ್ತದೆ. ಜೊತೆಗೆ ಈ ಕೊತ್ತಂಬರಿ ಸೊಪ್ಪು ಹಲವಾರು ಕಾಯಿಲೆಗಳನ್ನು ಗುಣಪಡಿಸಲು ಸಹ ನೆರವಾಗುತ್ತದೆ. ತಾಜಾ ಕೊತ್ತಂಬರಿ ಸೊಪ್ಪಿನಲ್ಲಿ ವಿಟಮಿನ್ ಸಿ, ವಿಟಮಿನ್ ಎ, ಆಂಟಿ ಆಕ್ಸಿಡೆಂಟ್‍ಗಳು ಮತ್ತು ರಂಜಕದಂತಹ ಖನಿಜಗಳು ಯಥೇಚ್ಛವಾಗಿರುವುದರಿಂದ, ಇವು ಮಕುಲರ್ ಡಿಜೆನರೇಷನ್, ಕಂಜಂಕ್ಟಿವಿಟಿಸ್, ಕಣ್ಣುಗಳಿಗೆ ಉಂಟಾಗುವ ವಯೋಸಹಜ ಕಾಯಿಲೆಗಳು ಮತ್ತು ಒತ್ತಡದಿಂದ ಕಣ್ಣುಗಳಿಗೆ ಆದ ಆಯಾಸವನ್ನು ಪರಿಹರಿಸಲು ನೆರವಾಗುತ್ತವೆ.
ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಜಜ್ಜಿ, ಅದನ್ನು ನೀರಿನಲ್ಲಿ ಬೇಯಿಸಿ. ನಂತರ ಆ ರಸವನ್ನು ಸ್ವಚ್ಛವಾಗಿರುವ ಬಟ್ಟೆಯ ಮೇಲೆ ಸುರಿದುಕೊಳ್ಳಿ. ಹೀಗೆ ಸುರಿದುಕೊಂಡ ಬಟ್ಟೆಯಿಂದ ನಿಮ್ಮ ಕಣ್ಣಿಗೆ ಕೆಲವು ಹನಿಗಳನ್ನು ಬಿಡಿ. ಹೀಗೆ ಮಾಡುವುದರಿಂದ ನಿಮ್ಮ ಕಣ್ಣಿನ ನೋವು ಮತ್ತು ತುರಿಕೆಗಳು ಹಾಗು ಕಣ್ಣೀರು ಬರುವ ಸಮಸ್ಯೆಗಳು ನಿವಾರಣೆಯಾಗುತ್ತವೆ.
ಕೆಲವರಿಗೆ, ಗರ್ಭಿಣಿಯಾದ ಆರಂಭದ ತಿಂಗಳಲ್ಲಿ ವಾಂತಿ ಮತ್ತು ನಾಸಿಯಾದ ಸಮಸ್ಯೆ ಅಧಿಕವಾಗಿ ಕಾಡುತ್ತದೆ. ಅದಕ್ಕಾಗಿ ಒಂದು ಕಪ್ ಕೊತ್ತಂಬರಿ ಸೊಪ್ಪು, ಒಂದು ಕಪ್ ಸಕ್ಕರೆ ಹಾಗು ನೀರನ್ನು ಸೇರಿಸಿ ಚೆನ್ನಾಗಿ ಕುದಿಸಿ, ಇದು ಆರಿದ ನಂತರ ಅದನ್ನು ಸೇವಿಸಿ ವಾಂತಿಯಿಂದ ಉಪಶಮನ ಪಡೆಯಬಹುದು.

ತಾಜಾ ಕೊತ್ತಂಬರಿ ಸೊಪ್ಪಿನ ಎಣ್ಣೆಯಲ್ಲಿ ಸಿಟ್ರೊನೆಲೊಲ್ ಎಂಬ ಅಗತ್ಯ ಅಂಶ ಅಡಗಿದೆ. ಈ ಅಂಶವು ಒಂದು ಪರಿಣಾಮಕಾರಿಯಾದ ನಂಜು ನಿರೋಧಕವಾಗಿದೆ. ಇದರ ಜೊತೆಗೆ ಇದು ಅಂಟಿ ಮೈಕ್ರೊಬಿಯಲ್ ಮತ್ತು ಬಾಯಿಯ ಹುಣ್ಣಿನಿಂದಾಗುವ ನೋವನ್ನು ನಿವಾರಿಸುವ ಅಂಶವನ್ನು ಹೊಂದಿದೆ. ಜೊತೆಗೆ ಹುಣ್ಣನ್ನು ಸಹ ವಾಸಿಯಾಗುವಂತೆ ಮಾಡುತ್ತದೆ. ಇದರ ಜೊತೆಗೆ ಬಾಯಿಯ ದುರ್ವಾಸನೆಯನ್ನು ತೊಲಗಿಸುತ್ತದೆ. ತಾಜಾ ಕೊತ್ತಂಬರಿ ಸೊಪ್ಪಿನಲ್ಲಿ ಅಗತ್ಯವಾದ ಎಣ್ಣೆ ಅಂಶ ಮತ್ತು ಸಮೃದ್ಧ ಸುವಾಸನೆ ಇದೆ.
ಇವುಗಳು ಅಪಟೈಜರ್ ನಂತೆ ವರ್ತಿಸಿ, ಜಠರದಲ್ಲಿರುವ ಕಿಣ್ವಗಳನ್ನು ಮತ್ತು ಜೀರ್ಣಕಾರಿ ರಸಗಳನ್ನು ಉದ್ದೀಪನಗೊಳಿಸಿ, ಪಚನ ಕ್ರಿಯೆಯನ್ನು ಸುಗಮಗೊಳಿಸುತ್ತದೆ. ಇದರಿಂದ ಜೀರ್ಣ ಕ್ರಿಯೆಯು ಸರಾಗವಾಗಿ ನೆರವೇರುವಂತೆ ಮಾಡುತ್ತವೆ. ಇದರ ಜೊತೆಗೆ ಕೊತ್ತಂಬರಿ ಸೊಪ್ಪು ಅನೊರೆಕ್ಸಿಯ ಎಂದರೆ ಊಟ ಮಾಡಲು ಇರುವ ವಿನಾಕಾರಣ ಭೀತಿಯನ್ನು ನಿವಾರಿಸಲು ಕೂಡ ನೆರವಾಗುತ್ತದೆ.
- ಪವಿತ್ರ ಸಚಿನ್