A bit expensive, but very healthy Makhana
Health Benefits Of Makhana: ಮಖಾನ ಅಯ್ಯೋ ಇದೇನಪ್ಪಾ ಅಂದ್ಕೊಂಡ್ರಾ! ತಾವರೆಯ ಬೀಜ ಇಲ್ಲವೇ ಮಖಾನ (Makhana) ಎಂದು ಕರೆಯಲ್ಪಡುವ ಲೋಟಸ್ ಅಥವಾ ಫಾಕ್ಸ್ ಸೀಡ್ಸ್ ಹಲವರಿಗೆ ಅಪರಿಚಿತ. ಇದು ಯಾವುದೋ ಹೊಸ ಹೆಸರು ಎಂದು ತಿಳಿದು ಕೊಳ್ಳುವವರಿಗೆ ತಾವರೆ ಬೀಜಗಳು ಎಂದು ಸುಲಭವಾಗಿ ಹೇಳಬಹುದು.
ತಮ್ಮಲ್ಲಿನ ಅಸಂಖ್ಯಾತ ಆರೋಗ್ಯ ಪ್ರಯೋಜನಗಳನ್ನು ಮನುಷ್ಯರಿಗೆ ಒದಗಿಸುವ ಕೆಲಸ ಮಖಾನ ಬೀಜಗಳದ್ದು. ಚೀನಾ (China) ದೇಶದಲ್ಲಂತೂ ಇವುಗಳನ್ನು ಔಷಧಿ ತಯಾರಿಕೆಯಲ್ಲಿ ಉಪಯೋಗ ಮಾಡುತ್ತಾರೆ. ಮೂತ್ರ ಪಿಂಡಗಳು ಮತ್ತು ಗುಲ್ಮ ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿರುವವರು ಇವುಗಳನ್ನು ಸೇವಿಸಬಹುದು.
ಕೊಂಚ ದುಬಾರಿ ಬೆಲೆ ಅನ್ನಿಸಿದರೂ ಕೂಡ ಮಖಾನ ಬೀಜಗಳಲ್ಲಿ ಪ್ರೋಟೀನ್ (Protein) ಅಂಶ ಅಧಿಕವಾಗಿದೆ. ಡಯಟ್ ಮಾಡಿ ದೇಹದ ತೂಕ ಕರಗಿಸಿಕೊಳ್ಳುವ ವ್ಯಕ್ತಿಗಳಿಗೆ ಉಪವಾಸದ ಸಮಯದಲ್ಲಿ ಇವುಗಳು ಸಹಾಯಕ್ಕೆ ಬರುತ್ತವೆ. ಬಿಡಿಸಿ ಹೇಳಬೇಕೆಂದರೆ ಬೆಳಗಿನ ಸಮಯದಲ್ಲಿ ಒಂದು ಹಿಡಿ ಮಖಾನ ಬೀಜಗಳನ್ನು ಸೇವಿಸಿದರೆ ಇಡೀ ದಿನ ಹಸಿವಿಲ್ಲದೆ ಸುಲಭವಾಗಿ ತಮ್ಮ ತಮ್ಮ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸಬಹುದು.
ಒಂದು ಬಟ್ಟಲು ಮಖಾನ ಬೀಜಗಳನ್ನು ಸೇವಿಸಿದರೂ ಸಹ ನಿಮ್ಮ ಕ್ಯಾಲರಿಗಳಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ. ಅಂದರೆ ಮಖಾನ ಬೀಜಗಳು ಕಡಿಮೆ ಕ್ಯಾಲೋರಿ ಅಂಶಗಳನ್ನು ಹೊಂದಿರುತ್ತವೆ. ಹಾಗಾಗಿ ತೂಕ ಇಳಿಕೆಗೆ ಹೇಳಿ ಮಾಡಿಸಿದ ಆಹಾರವಿದು. ಇನ್ನು ಈ ತಾವರೆ ಬೀಜಗಳಲ್ಲಿ ಆಂಟಿ – ಏಜಿಂಗ್ ಗುಣ ಲಕ್ಷಣಗಳಿಂದ ಯಥೇಚ್ಛವಾದ ಆಂಟಿ – ಆಕ್ಸಿಡೆಂಟ್ (Anti-Oxidants) ಗಳನ್ನು ಒಳಗೊಂಡಿವೆ. ಪ್ರತಿ ದಿನ ಒಂದು ಹಿಡಿ ಮಖಾನ ಬೀಜಗಳನ್ನು ಸೇವಿಸುವುದರಿಂದ ನಿಮ್ಮ ಸೌಂದರ್ಯ ಹಾಗೂ ಯೌವ್ವನ ಹಾಗೇ ಉಳಿದು ನಿಮ್ಮ ದೇಹದ ಚರ್ಮದ ಹೊಳಪು ಹೆಚ್ಚುತ್ತದೆ. ಆದರೆ ಯಾವುದೇ ಕಾರಣಕ್ಕೂ ಮಖಾನ ಬೀಜಗಳನ್ನು ಎಣ್ಣೆಯಲ್ಲಿ ಕರಿದು ತಿನ್ನಬಾರದು.
ಮಖಾನ ಬೀಜಗಳು ಮಧುಮೇಹಿ ಮತ್ತು ಹೃದಯ ರಕ್ತನಾಳಗಳ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಬಹಳ ಒಳ್ಳೆಯ ಆಹಾರ ಎನಿಸಿವೆ. ಏಕೆಂದರೆ ಇವುಗಳಲ್ಲಿ ದೇಹಕ್ಕೆ ಅಗತ್ಯವಿರುವ ಒಳ್ಳೆಯ ಕೊಬ್ಬಿನ ಅಂಶಗಳು ಹೇರಳವಾಗಿದ್ದು, ಸ್ಯಾಚುರೇಟೆಡ್ ಕೊಬ್ಬಿನ (Saturated Fat) ಅಂಶಗಳು ಬಹಳಷ್ಟು ಕಡಿಮೆ ಇವೆ. ಇನ್ನು ಈ ಬೀಜಗಳಲ್ಲಿ ನಾರಿನ ಅಂಶ ಹೆಚ್ಚಿದೆ. ಮನುಷ್ಯನ ಜೀರ್ಣ ಪ್ರಕ್ರಿಯೆಯಲ್ಲಿ ಇದು ಬಹಳಷ್ಟು ಸಹಾಯಕವಾಗಿದೆ.
ಮಖಾನ ಬೀಜಗಳು ಆಂಟಿ – ಬ್ಯಾಕ್ಟರಿಯಲ್ ಗುಣ ಲಕ್ಷಣಗಳನ್ನು ಸಹ ಹೊಂದಿವೆ. ಇದರಿಂದ ಹಲವಾರು ಬ್ಯಾಕ್ಟೀರಿಯಾ (Bacteria) ಸಂಬಂಧಿತ ಸಮಸ್ಯೆಗಳು ಸಹ ದೂರವಾಗುತ್ತವೆ.