ನಮ್ಮ ಇಂದಿನ ಆಧುನಿಕ ಜೀವನ ಶೈಲಿ ಗೊತ್ತಿದ್ದೋ, ಗೊತ್ತಿಲ್ಲದೆಯೋ ಎಲ್ಲರನ್ನೂ ಮಾನಸಿಕ ಒತ್ತಡಕ್ಕೆ ಗುರಿಯಾಗಿಸುತ್ತಿದೆ. ಅತಿಯಾದ ಮೊಬೈಲ್, ಕಂಪ್ಯೂಟರ್‌ಗಳ ಬಳಕೆ ನಮ್ಮನ್ನು ಮಾನಸಿಕವಾಗಿ, ದೈಹಿಕವಾಗಿ ಬಳಲುವಂತೆ ಮಾಡುತ್ತದೆ. ಮನಸ್ಸು ಮಾಡಿದರೆ ಒತ್ತಡದಿಂದ ಹೊರ ಬರುವುದು ಕಷ್ಟವಲ್ಲ ಎನ್ನುತ್ತದೆ ಅಧ್ಯಯನ. ಅಂತಹ ಮಾನಸಿಕ ನೆಮ್ಮದಿಗೆ ಕಾರಣವಾಗಬಲ್ಲ ಕೆಲವು ಸರಳ ಉಪಾಯಗಳು ಇಲ್ಲಿವೆ.

ಹಾರ್ವರ್ಡ್ ವಿಜ್ಞಾನಿಗಳು ನಡೆಸಿದ ಸಂಶೋಧನೆಯ ಪ್ರಕಾರ ಮನೆಯೊಳಗೆ ತಾಜಾ ಹೂಗಳನ್ನು ಇರಿಸುವುದರಿಂದ ಋಣಾತ್ಮಕ ಆಲೋಚನೆಗಳು, ಆತಂಕ ಮರೆಯಾಗಿ ಮನಸ್ಸು ಶಾಂತವಾಗುತ್ತದೆ.
ಎಲ್ಲಾ ಚಿಂತೆಗಳಿಗೂ ಉತ್ತಮ ಔಷದ ಎಂದರೆ ನಗು. ಸಂತೋಷದ ಪ್ರತೀಕವೇ ನಗು. ಸಂಶೋಧನೆಯ ಪ್ರಕಾರ ಬಲವಂತದಿಂದ ನಗುವುದು ಕೂಡ ನಿಮ್ಮ ಖುಷಿಯನ್ನು ಹೆಚ್ಚಿಸಬಲ್ಲದು. ನೀವು ನಕ್ಕಾಗ ಮೆದುಳಿನಲ್ಲಿರುವ ನರ ಸಕ್ರಿಯವಾಗಿ ಧನಾತ್ಮಕ ಅಂಶ ತುಂಬಬಲ್ಲದು ಎನ್ನಲಾಗಿದೆ. ಹೀಗಾಗಿ ಆಗಾಗ ನಗುತ್ತಿದ್ದರೆ ಮನಸ್ಸಿನ ಆರೋಗ್ಯಕ್ಕೂ ಬಹಳಷ್ಟು ಒಳ್ಳೆಯದು.
ಹೊರಗೆ ಸುತ್ತಾಡುವುದರಿಂದ ಮನಸ್ಸು ನಿರಾಳವಾಗುತ್ತದೆ. ಮಾನಸಿಕವಾಗಿ ತುಂಬಾ ಕುಗ್ಗಿದ್ದರೆ ಇದರಿಂದ ಹೊರಗೆ ಬರೋದು ಹೇಗೆ ಎಂದು ಆಲೋಚಿಸುತ್ತಿದ್ದರೆ ಚಿಂತೆ ಬಿಡಿ. ಒಮ್ಮೆ ಹೊರಗೆ ಸುತ್ತಾಡಿ ಬನ್ನಿ. ಹೌದು, ಸೂರ್ಯನ ಬಿಸಿಲಲ್ಲಿ ಓಡಾಡುವುದರಿಂದ ವಿಟಮಿನ್ ಡಿ ಸಾಕಷ್ಟು ಪ್ರಮಾಣದಲ್ಲಿ ದೊರೆಯುತ್ತದೆ. 20-25 ನಿಮಿಷ ಬಿಸಿಲಿನಲ್ಲಿ ನಡೆದರೆ ಸಹಜವಾಗಿ ಮನಃಸ್ಥಿತಿ ತಹಬದಿಗೆ ಬರುತ್ತದೆ.
ಇನ್ನು ಅಡುಗೆಯಲ್ಲಿ ಬಳಸುವ ಅರಿಶಿನಕ್ಕೆ ಖಿನ್ನತೆಯನ್ನು ದೂರ ಮಾಡುವ ಶಕ್ತಿ ಹೊಂದಿದೆ. ಆದ್ದರಿಂದ ಪ್ರತಿದಿನದ ಆಹಾರದಲ್ಲಿ ಅರಿಶಿನ ಅಂಶ ಇರುವಂತೆ ನೋಡಿಕೊಳ್ಳಿ.

ಜೊತೆಗೆ ಅರಿಶಿನವು ಸಂಧಿವಾತ, ಅಲ್ಜಿಮರ್ ಮತ್ತು ಸಕ್ಕರೆ ಕಾಯಿಲೆಯನ್ನು ದೂರ ಮಾಡುವ ಗುಣ ಹೊಂದಿದೆ. ಸಂಗೀತವನ್ನು ಆಲಿಸಿಸುವುದೂ ಕೂಡ ಒಳ್ಳೆಯ ಅಭ್ಯಾಸ. ಮನಸ್ಸಿಗೆ ತೀರಾ ಖನ್ನತೆ ಆವರಿಸಿದಾಗ ಮೊದಲು ಬಯಸುವುದು ಇಂಪಾದ ಸಂಗೀತವನ್ನು. ಹೌದು ಸಂಗೀತಕ್ಕೆ ಒತ್ತಡ ನಿವಾರಿಸಿ ಮಾನಸಿಕ ನೆಮ್ಮದಿ ತರುವ ಗುಣ ಇದೆ. ಆದ್ದರಿಂದ ದಿನದಲ್ಲಿ ಸ್ವಲ್ಪ ಹೊತ್ತು ಸಂಗೀತ ಕೇಳಿ.
ವಿಟಮಿನ್ ಡಿ ಯನ್ನು ಸಾಕಷ್ಟು ಪ್ರಮಾಣದಲ್ಲಿ ಹೊಂದಿರುವ ಅಣಬೆ ಸೇವನೆಯೂ ಮಾನಸಿಕ ಸ್ಥಿತಿಯನ್ನು ಉತ್ತಮಪಡಿಸುವ ಗುಣ ಹೊಂದಿದೆ. ಮೊದಲೇ ಹೇಳಿದಂತೆ ವಿಟಮಿನ್ ಡಿ ಪೋಷಕಾಂಶವು ಧನಾತ್ಮಕ ಚಿಂತನೆಯನ್ನು ಹೆಚ್ಚಿಸಬಲ್ಲದು.
ಹೀಗಾಗಿ ಊಟದ ಮೆನುವಿನಲ್ಲಿ ಅಣಬೆಗೂ ಜಾಗ ನೀಡುವುದು ಒಳಿತು.
ಇನ್ನು, ಚಾಕಲೇಟ್‌ನಲ್ಲಿ ಟ್ರಿಟ್ರೋಫಾನ್ ಅಂಶವಿದ್ದು, ಇದು ಮೆದುಳನ್ನು ಪ್ರಚೋದಿಸಿ ಸೆರಟೋನಿನ್ ಎನ್ನುವ ಹ್ಯಾಪಿ ಹಾರ್ಮೋನ್ ನ್ನು ಬಿಡುಗಡೆಗೊಳಿಸುತ್ತದೆ. ಹೀಗಾಗಿ ಚಾಕಲೇಟ್ ಸೇವಿಸಿ ಒತ್ತಡ ಮುಕ್ತರಾಗಬಹುದು. ಈ ಟ್ರಿಟ್ರೋಫಾನ್ ಅಂಶ ಚಿಕನ್ ಹಾಗೂ ಮೊಟ್ಟೆಯಲ್ಲಿಯೂ ಇದೆ.