ಬೇಸಿಗೆ(Summer) ಎಂದರೆ ಸಾಕು ಬಿಸಿಲಿನ ತಾಪ ಹೇಳತೀರದು. ಬಿಸಿಲಿನ ಬೇಗೆಯನ್ನು ಸಾಮಾನ್ಯವಾಗಿ ತಡೆಯುವುದು ಅಸಾಧ್ಯವಾಗಿದೆ. ಬೇಸಿಗೆಯ ದಿನಗಳಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನವೂ ಹೆಚ್ಚುತ್ತಲ್ಲೇ ಇರುತ್ತದೆ ಹೊರತು ಕಡಿಮೆಯಾಗುವುದಿಲ್ಲ. ಬಿಸಿಲಿನ ತಾಪಮಾನವನ್ನು ಕೊಂಚ ಮಟ್ಟಿಗಾದರೂ ತಗ್ಗಿಸುವ ಶಕ್ತಿ ಇರುವುದು ತಂಪು ಪಾನೀಯಗಳಿಗೆ ಮಾತ್ರ. ಅದರಲ್ಲಿ ಕೂಡ ನೀರಿನ ಅಂಶವನ್ನು ಒಳಗೊಂಡಿರುವ ಹಣ್ಣಿನ ರಸ ಅಥವಾ ಕೆಲವು ತಂಪು ಪಾನೀಯಗಳನ್ನು ಸೇವಿಸುವುದರಿಂದ ದೇಹವು ತಂಪಾಗಿರುತ್ತದೆ. ತಂಪು ಪಾನೀಯಗಳನ್ನು ಸೇವಿಸುವುದರಿಂದ ಬಿಸಿಲಿನ ತಾಪದಿಂದ ದಂಗಾದ ದೇಹವು ಸ್ವಲ್ಪ ಮಟ್ಟಿಗಾದರೂ ಸುಧಾರಿಸುತ್ತದೆ ಮತ್ತು ಇದು ಆರೋಗ್ಯಕ್ಕೆ ಕೂಡ ಬಹಳ ಉಪಯುಕ್ತವಾಗಿದೆ.
ದೇಹವನ್ನು ತಂಪಾಗಿಡುವ ಪಾನೀಯಗಳನ್ನು ತಿಳಿಯೊಣ :

ಎಳನೀರು : ಎಳನೀರು ದೇಹಕ್ಕೆ ಬಹಳ ಒಳ್ಳೆಯದು. ಎಳನೀರು ಕುಡಿದರೆ ದೇಹವು ತಂಪಾಗಿರುತ್ತದೆ. ಅಷ್ಟೇ ಅಲ್ಲ ಎಳನೀರಿನ ಗಂಜಿ ಕೂಡ ಆರೋಗ್ಯಕರ ಗುಣ ಲಕ್ಷಣಗಳನ್ನು ಹೊಂದಿದ್ದು ದೇಹಕ್ಕೆ ಉತ್ತಮ ಆರೋಗ್ಯವನ್ನು ಒದಗಿಸುತ್ತದೆ. ಎಳನೀರನ್ನು ಕುಡಿಯುವುದರಿಂದ ರಕ್ತ ಸಂಚಲನ ಸುಲಭವಾಗಿ ಆಗುತ್ತದೆ. ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಇದು ದೇಹಕ್ಕೆ ಕಬ್ಬಿಣಾಂಶವನ್ನು ಕೂಡ ಒದಗಿಸುತ್ತದೆ. ಅದರಲ್ಲೂ ಬೇಸಿಗೆ ಕಾಲದಲ್ಲಿ ಎಳನೀರನ್ನು ಸೇವಿಸಿದರೆ ದೇಹವು ತಂಪಾಗಿರುತ್ತದೆ.
ಮೊಸರು ಮತ್ತು ಮಜ್ಜಿಗೆ :
ಮೊಸರು ಮತ್ತು ಮಜ್ಜಿಗೆ ಇವುಗಳನ್ನು ಸೇವಿಸಿದರೆ ದೇಹಕ್ಕೆ ತುಂಬಾ ತಂಪು ನೀಡುತ್ತದೆ. ಅದರಲ್ಲೂ ಕೂಡ ಹಳ್ಳಿಯ ಕಡೆ ಮೊಸರು, ಮಜ್ಜಿಗೆ ಎಂದರೆ ಎಲ್ಲರಿಗೂ ಪ್ರಿಯ ಪಾನೀಯವೇ ಹೌದು. ಮೊಸರಿಗೆ ಸ್ವಲ್ಪ ಸಕ್ಕರೆ ಮಿಶ್ರಣ ಮಾಡಿ ಕುಡಿದರೆ ದೇಹಕ್ಕೆ ತಂಪು ಎನಿಸುತ್ತದೆ ಮತ್ತು ಮಜ್ಜಿಗೆಗೆ ಉಪ್ಪು ಬೆರೆಸಿ ಕುಡಿದರೆ ದೇಹಕ್ಕೆ ಶಕ್ತಿ ನೀಡುತ್ತದೆ. ಬೇಸಿಗೆಯಲ್ಲಿ ತಣ್ಣನೆಯ ಮಜ್ಜಿಗೆ, ಮೊಸರನ್ನು ಕುಡಿಯುವುದರಿಂದ ದೇಹದಲ್ಲಿ ತಣ್ಣನೆಯ ಅನುಭವವಾಗುತ್ತದೆ. ಅಷ್ಟೆ ಅಲ್ಲ ಮೊಸರು ವಿಟಮಿನ್ ‘ಬಿ’ ಮತ್ತು ‘ಡಿ’ ಪೌಷ್ಟಿಕಾಂಶವನ್ನು ಹೊಂದಿದೆ.

ಕಲ್ಲಂಗಡಿ ಹಣ್ಣಿನ ಜ್ಯೂಸ್ :
ಕಲ್ಲಂಗಡಿ ಹಣ್ಣಿನಲ್ಲಿ ಶೇಕಡಾ 90% ರಷ್ಟು ನೀರಿನಾಂಶ ಇರುತ್ತದೆ. ಕಲ್ಲಂಗಡಿ ಹಣ್ಣಿನ ರಸವನ್ನು ಕುಡಿಯುವುದರಿಂದ ದೇಹದ ದಣಿವು ನೀಗಿಸಿಕೊಳ್ಳಬಹುದು.
ಅದರಲ್ಲೂ ಬೇಸಿಗೆ ಕಾಲದಲ್ಲಿ ಕಲ್ಲಂಗಡಿ ಹಣ್ಣಿನ ಜ್ಯೂಸ್ ಕುಡಿಯುವುದರಿಂದ ದೇಹಕ್ಕೆ ತಂಪು ಉಂಟು ಮಾಡಿ, ದೇಹ ಇನ್ನೂ ಕೂಡ ಉತ್ಸಾಹ ಭರಿತವಾಗುವಂತೆ ನೋಡಿಕೊಳ್ಳುತ್ತದೆ.
ಈರುಳ್ಳಿ ಜ್ಯೂಸ್ :
ಈರುಳ್ಳಿಯನ್ನು ಎಲ್ಲರೂ ಕೂಡ ಖಾರ ಖಾರ ಎನ್ನುತ್ತಾರೆ. ಎಷ್ಟೋ ಜನರಿಗೆ ಈರುಳ್ಳಿ ಎಂದರೆ ವಾಕರಿಕೆ ಬಂದಂತೆ ಆಗುತ್ತದೆ. ಆದರೆ ಈರುಳ್ಳಿಯ ಉಪಯುಕ್ತತೆ ತಿಳಿದರೆ ಎಲ್ಲರೂ ಕೂಡ ಈರುಳ್ಳಿ ಸೇವನೆ ಮಾಡುತ್ತಾರೆ. ಈರುಳ್ಳಿ ಜ್ಯೂಸ್ ಅನ್ನು ಬೇರೆ ಜ್ಯೂಸ್ ಗಳನ್ನು ಕುಡಿಯುವುದಲ್ಲ ಒಂದು ಚಿಕ್ಕ ಚಮಚ ಅಥವಾ ಒಂದು ಚಿಕ್ಕ ಲೋಟದಲ್ಲಿ ಈರುಳ್ಳಿ ರಸವನ್ನು ಸಂಗ್ರಹಿಸಿ ಕುಡಿಯಬೇಕು. ಇದು ಕೂಡ ದೇಹದ ಉಷ್ಣಾಂಶವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ.

ನೆಲ್ಲಿಕಾಯಿ ಜ್ಯೂಸ್ :
ನೆಲ್ಲಿಕಾಯಿಯ ಜ್ಯೂಸ್ ಕುಡಿಯುವುದರಿಂದ ಅನೇಕ ರೋಗವನ್ನು ನಿಯಂತ್ರಿಸಬಹುದು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ ರಸವನ್ನು ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ದೇಹವು ತಂಪಾಗಿರುತ್ತದೆ.
ಹುಣಸೆ ಹಣ್ಣಿನ ಜ್ಯೂಸ್ :
ಸಾಮಾನ್ಯವಾಗಿ ಹುಣಸೆ ಹಣ್ಣು ಪ್ರತಿಯೊಬ್ಬರ ಮನೆಯಲ್ಲಿ ಕೂಡ ಇದ್ದೇ ಇರುತ್ತದೆ. ಆ ಹುಣಸೆ ಹಣ್ಣನ್ನು ಉಪಯೋಗಿಸಿಕೊಂಡು ಜ್ಯೂಸ್ ಮಾಡಬಹುದು. ಹುಣಸೆ ಹಣ್ಣಿನ ಜೊತೆಗೆ ಸ್ವಲ್ಪ ಏಲಕ್ಕಿ, ಸ್ವಲ್ಪ ಸಕ್ಕರೆ, ಸ್ವಲ್ಪ ಜೇನನ್ನು ಬೆರೆಸಿ ಜ್ಯೂಸ್ ಮಾಡಿ ಕುಡಿಯುವುದರಿಂದ ದೇಹವು ತಂಪಾಗಿರುತ್ತದೆ.
- Sowjanya