ಬೆಳಗಾವಿ, ಏ. 26: ರಾಜ್ಯದಲ್ಲಿ ಕೊರೊನಾ ಮಹಾಮಾರಿ ಆರ್ಭಟ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬೆಳಗಾವಿಯ ಅಂಕಲಿಯಲ್ಲಿ ನೂತನವಾಗಿ ನಿರ್ಮಿಸಿರುವ ಸುಸಜ್ಜಿತ ಕೋವಿಡ್ ಆಸ್ಪತ್ರೆಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಆನ್‌ಲೈನ್ ಮೂಲಕ ಉದ್ಘಾಟಿಸಿದರು.
ಈ ಬಗ್ಗೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಸದಲಗಾ ವಿಧಾನಸಭೆ ಕ್ಷೇತ್ರದ ಅಂಕಲಿಯಲ್ಲಿ ಉದ್ಘಾಟಿಸಿರುವ ಈ ಆಸ್ಪತ್ರೆ ಬೆಳಗಾವಿ ಜಿಲ್ಲೆಯ ಎರಡನೇ ದೊಡ್ಡ ಖಾಸಗಿ ಕೋವಿಡ್ ಆಸ್ಪತ್ರೆಯಾಗಿದೆ. ಸುಮಾರು 120 ಬೇಡ್ ಗಳ ಸೌಲಭ್ಯ ಹೊಂದಿದೆ. ಸೋಂಕಿತರಿಗೆ ಚಿಕಿತ್ಸೆ ನೀಡುವುದರ ಜೊತೆಗೆ ಉಪಾಹಾರ, ಊಟ, ಹಣ್ಣುಗಳನ್ನು ಶಾಸಕರಾದ ಗಣೇಶ್ ಹುಕ್ಕೇರಿ ಹಾಗೂ ಮಾಜಿ ಸಚಿವರಾದ ಪ್ರಕಾಶ್ ಹುಕ್ಕೇರಿ ನೇತೃತ್ವದಲ್ಲಿ ಉಚಿತವಾಗಿ ನೀಡುತ್ತಿರುವ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
ಅಲ್ಲದೇ, ಕೋವಿಡ್ 2ನೇ ಅಲೆ ರಾಜ್ಯ ಮತ್ತು ರಾಷ್ಟ್ರವನ್ನು ಬಾಧಿಸುತ್ತಿದೆ. ಇಂತಹ ಸಂದರ್ಭದಲ್ಲಿ ರಾಜ್ಯದ ಜನತೆ ಮುನ್ನೆಚ್ಚರಿಕೆ ವಹಿಸುವುದು ತೀರಾ ಅಗತ್ಯ. ಮಾಸ್ಕ್ ಧರಿಸುವ, ಸಾಮಾಜಿಕ ಅಂತರ ಕಾಪಾಡುವ ಮೂಲಕ ಸೋಂಕಿನಿಂದ ದೂರ ಇರಬೇಕು ಎಂದು ಮನವಿ ಮಾಡಿದರು.
ನಮ್ಮ ಪಕ್ಷದ ಎಲ್ಲಾ ಶಾಸಕರು ಸೋಂಕಿತರ ಚಿಕಿತ್ಸೆಗೆ ಅಗತ್ಯವಾದ ಆಸ್ಪತ್ರೆ, ಆಕ್ಸಿಜನ್, ಔಷಧಿ, ಆಂಬ್ಯುಲೆನ್ಸ್ ದೊರೆಯಲು ನೆರವು ನೀಡಬೇಕು ಹಾಗೂ ಹಸಿವಿನಿಂದ ಬಳಲುತ್ತಿರುವವರಿಗೆ ಅನ್ನ ಆಹಾರದ ವ್ಯವಸ್ಥೆಯನ್ನು ಕಳೆದ ವರ್ಷದಂತೆ ಈ ವರ್ಷವೂ ಮಾಡುವ ಮೂಲಕ ಜನರ ಕಷ್ಟಕಾಲದಲ್ಲಿ ನೆರವಾಗಬೇಕು ಎಂದು ಕೋರಿದರು.