ಮೊಣಕಾಲಿನ ವರೆಗೆ ತುಂಬಿಕೊಂಡಿದೆ ಹೂಳು, ಅಲ್ಲಲ್ಲಿ ಬಿರುಕು ಬಿದ್ದಿರುವ ನಾಲೆ. ನಾಲೆಯ ಸುತ್ತಾ ಬೆಳೆದಿರುವ ಗಿಡಗಂಟಿ.
ಇದು ಕೆ.ಆರ್ ಪೇಟೆ ರೈತರ ಜೀವನಾಡಿಯಾಗಿರುವ ಹೇಮಾವತಿ ಎಡದಂಡೆ ನಾಲೆಯ ದುಸ್ಥಿತಿ,
ಮಳೆಗಾಲ ಬಂದರೆ ಸಾಕು ಇಲ್ಲಿನ ರೈತರು ಹತ್ತಾರು ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ನೀರಾವರಿ ಇಲಾಖೆ ಕೈಗೊಂಡಿರುವ ಹೇಮಾವತಿ ಎಡದಂಡೆಯ ನಾಲೆಗಳ ಆಧುನೀಕರಣ ಕಾರ್ಯ.
ನೀರಾವರಿ ಇಲಾಖೆ ಬಂಡಿಹೊಳೆ ಬಳಿಯಿಂದ ವಿಠಲಾಪುರ ಮಾರ್ಗವಾಗಿ ಹೂಳೆತ್ತುವ ಕಾರ್ಯಕ್ರಮವನ್ನೇನೋ ಹಮ್ಮಿಕೊಂಡಿದ್ದಾರೆ. ಆದರೆ ಹೂಳೆತ್ತುವ ಸಂದರ್ಭದಲ್ಲಿ ಕಾಲುವೆಯ 2 ಅಡಿಯಷ್ಟು ನೀರು ಹರಿಯುತ್ತಿದ್ದು, ಕಾಲುವೆಯ ಮಧ್ಯಭಾಗದಲ್ಲಿ ಮಣ್ಣನ್ನು ಹಾಗೆ ಉಳಿಸಿದ್ದಲ್ಲದೆ ಅಕ್ಕ ಪಕ್ಕದ ಗಿಡಗಳನ್ನೂ ಕಡಿದಿಲ್ಲ.
ಅಲ್ಲದೇ ಕೇವಲ ಗ್ರಾಮಸ್ಥರು ಓಡಾಡುವ ರಸ್ತೆಗಳ ಬದಿಯಲ್ಲಿ ಮಾತ್ರ ಹೂಳೆತ್ತಿದ್ದಾರೆ . ಅದನ್ನೂ ಕೂಡ ಸರಿಯಾಗಿ ಮಾಡಲಿಲ್ಲ. ಬರೀ ಗ್ರಾಮಸ್ಥರ ಕಣ್ಣಿಗೆ ಮಣ್ಣೆರಚುವ ಸಲುವಾಗಿ ಹೂಳೆತ್ತುವ ಕಾರ್ಯ ಮಾಡಿ ಭಾರೀ ಅದ್ವಾನ ಮಾಡಿದ್ದಾರೆ.
ಅತ್ಯಂತ ಕಳಪೆಯಾಗಿ ಹೂಳೆತ್ತುವ ಕಾಮಗಾರಿ ಮಾಡಿದ್ರಿಂದ ಸುತ್ತಮುತ್ತಲಿನ ರೈತರ ಕೃಷಿ ಚಟುವಟಿಕೆಗಳಿಗೆ ಭಾರೀ ತೊಂದರೆಯುಂಟಾಗಿದೆ.
ಒಟ್ಟಾರೆಯಾಗಿ ಇಲ್ಲಿ ಕಳಪೆ ಹೂಳೆತ್ತುವ ಕಾಮಗಾರಿಯನ್ನು ನಡೆಸಿ ಸಕರ್ಕಾರಿ ಹಣವನ್ನು ದುರುಪಯೋಗಗೊಳಿಸಿದ್ದಾರೆ ಎಂಬುದು ಗ್ರಾಮಸ್ಥರ ದೂರಾಗಿದೆ. ಈ ಕಳಪೆ ಕಾಮಗಾರಿ ಯಾವುದೇ ಅಧಿಕಾರಿಗಳಿಗಾಗಲೀ, ಶಾಸಕರಿಗಾಗಲೀ ಕಾಣುತ್ತಿಲ್ಲ.
ಇನ್ನಾದರೂ ಸಂಬಂದಪಟ್ಟ ಅಧಿಕಾರಿಗಳು ಸರಿಯಾದ ಕಾಮಗಾರಿಯನ್ನು ನಡೆಸಿ, ರೈತರ ಆಕ್ರೋಶಕ್ಕೆ ಸರಿಯಾದ ಫಲವನ್ನು ನೀಡಲಿ ಎಂಬುದು ವಿಜಯಟೈಮ್ಸ್‌ನ ಆಶಯವಾಗಿದೆ.
ಕೆ. ಆರ್ ಪೇಟೆಯಿಂದ ಮನು ಮಾಕವಳ್ಳಿ ವಿಜಯಟೈಮ್ಸ್