ನಮ್ಮ ಕೂದಲಿನ ನೈಸರ್ಗಿಕತೆಯನ್ನು ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ಅದರಲ್ಲೂ ಗುಂಗುರು ಕೂದಲನ್ನು ಚೆನ್ನಾಗಿ ನಿರ್ವಹಣೆ ಮಾಡುವುದರ ಜೊತೆಗೆ ಅದು ಒರಟಾಗದತೆ ನೋಡಿಕೊಳ್ಳುವುದು ಒಂದು ಸವಾಲೇ ಸರಿ. ಅದನ್ನು ತೊಳೆಯಲು, ಬಾಚಲು, ಗೋಜಲನ್ನು ಬಿಡಿಸಲು ಪಡುವ ಪಾಡು ಅಷ್ಟಿಷ್ಟಲ್ಲ. ಆದ್ದರಿಂದ ಇಲ್ಲಿ ಗುಂಗುರು ಅಥವಾ ಸುರುಳಿಯಾಕಾರದ ಕೂದಲನ್ನು ನೈಸರ್ಗಿಕತೆಯನ್ನು ಕಾಪಾಡಿಕೊಳ್ಳುವುದು ಹೇಗೆ ಎಂಬುದನ್ನು ಹೇಳಿದ್ದೇವೆ. ಇದರಿಂದ ನಿಮ್ಮ ಕರ್ಲಿ ಕೂದಲು ಸಿಲ್ಕಿಯರ್ ಮತ್ತು ಗ್ಲೋಸಿಯರ್ ಆಗಿ ಕಾಣುವುದು.
ಗುಂಗುರು ಕೂದಲ ರಕ್ಷಣೆ ಮಾಡುವುದು ಹೇಗೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ:
ಹಂತ 1: ನಿಮ್ಮ ನೆಚ್ಚಿನ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ. ಶಾಂಪೂ ಸರಿಯಾಗಿ ಹೋಗಲು ನೆತ್ತಿಯನ್ನು ಚೆನ್ನಾಗಿ ತಿಕ್ಕಿ ತೊಳೆಯಿರಿ. ಇದರ ನಂತರ, ನಿಮ್ಮ ಕೂದಲಿಗೆ ಸರಿಹೊಂದುವಷ್ಟು ಪ್ರಮಾಣದ ಕಂಡಿಷನರ್ ತೆಗೆದುಕೊಂಡು ಅದನ್ನು ನಿಮ್ಮ ಕೂದಲಿನ ಮಧ್ಯದಿಂದ ಹಿಡಿದ ತುದಿಯವರೆಗೆ ನಿಧಾನವಾಗಿ ಹಚ್ಚುತ್ತಾ ಬನ್ನಿ. ನಿಮ್ಮ ಕೈ ಬೆರಳುಗಳು ಕೂದಲುಗಳ ನಡುವಿನಿಂದ ನಿಧಾನವಾಗಿ ಇಳಿಯಲಿ, ಯಾವುದೇ ಕಾರಣಕ್ಕೂ ಅವಸರ ಬೇಡ, ಇದು ಕೂದಲು ತುಂಡಾಗುವಿಕೆಗೆ ಕಾರಣವಾಗಬಹುದು. ಸ್ವಲ್ಪ ಸಮಯ ಬಿಟ್ಟು ತೊಳೆದು ಕೂದಲನ್ನು ಹಿಂಡಿಕೊಳ್ಳಿ.
ಹಂತ 2: ಕೂದಲನ್ನು ಹಿಂಡಿದ ನಂತರ ಉಳಿದಿರುವ ಹೆಚ್ಚುವರಿ ನೀರನ್ನು ಒಣಗಿಸಲು ಮೈಕ್ರೋಫೈಬರ್ ಟವೆಲ್ ಅಥವಾ ಹತ್ತಿಯ ಟೀ ಶರ್ಟ್ ಬಳಸಿ. ಗುಂಗುರು ಕೂದಲಿಗೆ ಇದೇ ಒಳ್ಳೆಯದು. ಒಂದು ವೇಳೆ ಸಾಮಾನ್ಯ ಟವೆಲ್ ಬಳಸಿದರೆ ಕೂದಲಿನ ವಿನ್ಯಾಸ ಕೆಟ್ಟುಹೋಗುವ ಸಾಧ್ಯತೆ ಹೆಚ್ಚಾಗಿರುವುದು.
ಹಂತ 3: ನಿಮ್ಮ ಕೂದಲನ್ನು ಹೈಡ್ರೇಟ್ ಮಾಡಲು ನಿಮ್ಮ ನೆಚ್ಚಿನ ಸ್ಟೈಲಿಂಗ್ ಹೇರ್ ಕ್ರೀಮ್ ನ್ನು ಸ್ವಲ್ಪ ಪ್ರಮಾಣದಲ್ಲಿ ತೆಗೆದುಕೊಳ್ಳಿ. ಇದನ್ನು ಮೃದುವಾದ ಕೈಗಳಿಂದ ಕೂದಲಿನ ಮೇಲೆ ನಿಧಾನವಾಗಿ ಹಚ್ಚಿ. ನೆನಪಿಡಿ ಇದನ್ನು ಹಚ್ಚುವಾಗಿ ಜಾಗರೂಕವಾಗಿರಬೇಕು. ಇಲ್ಲವಾದಲ್ಲಿ ನಿಮ್ಮ ಗುಂಗುರು ಕೂದಲಿನ ವಿನ್ಯಾಸ ಹಾಳಾಗಬಹುದು.
ಹಂತ 4: ಸ್ಕ್ರಂಚಿಂಗ್ ಎನ್ನುವುದು ನಿಮ್ಮ ಕೂದಲಿನ ಪ್ರಮಾಣವನ್ನು ಹೆಚ್ಚಿಸಲು ಮತ್ತು ನೈಸರ್ಗಿಕ ಸುರುಳಿಗಳನ್ನು ಉಳಿಸಿಕೊಳ್ಳಲು ಸಹಾಯ ಮಾಡುವ ತಂತ್ರವಾಗಿರುವುದರಿಂದ ಪ್ರತಿ ಹಂತದಲ್ಲೂ ನಿಮ್ಮ ಕೂದಲನ್ನು ಸ್ಕ್ರಂಚ್ ಮಾಡಲು ಮರೆಯದಿರಿ. ಸ್ಕ್ರಂಚಿಂಗ್ ಎಂದರೆ ನಿಮ್ಮ ಎರಡು ಕೈಗಳಿಂದ ಕೂದಲನ್ನು ಮೆಲ್ಲಗೆ ಹಿಂಡುವುದು. ಇದನ್ನು ಮಾಡುವ ವಿಧಾನ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಲಭ್ಯವಿವೆ. ಒಮ್ಮೆ ಅವುಗಳನ್ನು ಪರಿಶೀಲಿಸಿ.
ಹಂತ 5: ನಿಮಗೆ ಬೇಕಾದಂತೆ ನಿಮ್ಮ ಸುರುಳಿಗಳನ್ನು ರೂಪಿಸಲು ಮತ್ತು ವಿನ್ಯಾಸಗೊಳಿಸಲು ಕೂದಲು ವಿನ್ಯಾಸದ ಉತ್ಪನ್ನಗಳು ಸಹಾಯ ಮಾಡುತ್ತದೆ. ಮುಂದಿನ ಹಂತವೆಂದರೆ ನಿಮ್ಮ ಕೂದಲಿಗೆ ಹೇರ್ ಮೌಸ್ಸ್ ಅನ್ನು ಹಚ್ಚುವುದು, ನಿಮಗೆ ಇಷ್ಟವಿರುವ ಮೌಸ್ಸ್ ನ್ನು ಬಳಸಬಹುದು. ನಂತರ ಸ್ಕ್ರಂಚಿಂಗ್ ತಂತ್ರವನ್ನು ಪುನರಾವರ್ತಿಸುವುದು. ಹೇರ್ ಮೌಸ್ಸ್ ನಿಮ್ಮ ಕೂದಲನ್ನು ಆರ್ದ್ರತೆಯಿಂದ ರಕ್ಷಿಸುತ್ತದೆ ಮತ್ತು ಅವುಗಳನ್ನು ಮೃದುವಾಗಿಸುತ್ತದೆ.
ಹಂತ 6: ಮೈಕ್ರೋಫೈಬರ್ ಟವೆಲ್ ಅನ್ನು ಮತ್ತೆ ತೆಗೆದುಕೊಂಡು ನಿಮ್ಮ ಕೂದಲಿನಿಂದ ಹೆಚ್ಚುವರಿ ಉತ್ಪನ್ನಗಳು ಮತ್ತು ದ್ರವವನ್ನು ತೆಗೆಯಿರಿ. ನಿಮ್ಮ ಕೂದಲು ಒಣಗಲು ಬಿಡಿ ಮತ್ತು 20-30 ನಿಮಿಷಗಳ ನಂತರ ಸುಂದರ ಫಲಿತಾಂಶಗಳನ್ನು ನೋಡಿ.
ಹಂತ 7: ಕೊನೆಯ ಹಂತವೆಂದರೆ ಮಲಗುವ ಮುನ್ನ ನಿಮ್ಮ ಗುಂಗುರು ಕೂದಲಿನ ಮೇಲೆ ಆಂಟಿ-ಫ್ರಿಜ್ ಸೀರಮ್ ಅನ್ನು ಹಚ್ಚುವುದು. ಇದರಿಂದ ನಿಮ್ಮ ಕೂದಲು ಹೆಚ್ಚು ಬೌನ್ಸಿ, ಆರೋಗ್ಯಕರವಾಗಿ ಕಾಣುವುದು.