ಮಂಗಳೂರು : ರಾಜ್ಯದ ಕರಾವಳಿ ಜಿಲ್ಲೆಯಲ್ಲಿ(Coastal Districts) ಕೋಮು ಸಂಘರ್ಷ ಸ್ಪೋಟಗೊಳ್ಳುವ ಸಾಧ್ಯತೆ ಹೆಚ್ಚಿದ್ದು, ಪೊಲೀಸ್(Police) ಅಧಿಕಾರಿಗಳು ಈ ಕುರಿತು ಹಚ್ಚಿನ ನಿಗಾ ವಹಿಸಬೇಕು. ಇಲ್ಲದಿದ್ದರೆ, ಕರಾವಳಿಯಲ್ಲಿ ದೊಡ್ಡ ಮಟ್ಟದ ಕೋಮುಸಂಘರ್ಷ ನಡೆಯಲಿದೆ ಎಂದು ರಾಜ್ಯ ಗುಪ್ತಚರ ದಳ ಮಂಗಳೂರು ಪೊಲೀಸರಿಗೆ(Mangaluru Police) ಮಾಹಿತಿ ನೀಡಿದೆ ಎನ್ನಲಾಗಿದೆ.
ರಾಜಕೀಯ ಮತ್ತು ಕೋಮು ಹತ್ಯೆಗಳಿಂದ ಕರಾವಳಿಯಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದೆ.

ಹೀಗಾಗಿ ಮುಂದಿನ 3 ದಿನಗಳ ಕಾಲ ಕಠಿಣ ಪರಿಸ್ಥಿತಿ ಇದೆ. ಸಮಾಜಘಾತುಕ ಶಕ್ತಿಗಳು ಪರಿಸ್ಥಿತಿಯನ್ನು ಬಳಸಿಕೊಳ್ಳಲು ಭಾರೀ ಪ್ರಯತ್ನಗಳಿಗೆ ಕೈ ಹಾಕುತ್ತಿವೆ. ಒಂದು ವೇಳೆ ಕರಾವಳಿಯಲ್ಲಿ ಕೋಮುದಳ್ಳುರಿ ಹೊತ್ತಿಕೊಂಡರೆ ಅದರ ಪರಿಣಾಮ ಇಡೀ ರಾಜ್ಯ ಮೇಲಾಗಲಿದೆ. ಕರಾವಳಿ ಭಾಗದ ಮೂರು ಜಿಲ್ಲೆಗಳ ಜೊತೆಗೆ ಮಲೆನಾಡು ಭಾಗದ ಶಿವಮೊಗ್ಗ(Shivmogga), ಚಿಕ್ಕಮಗಳೂರು(Chikkamaglur), ಕೊಡಗು(Kodagu) ಮತ್ತು ಹಾಸನ(Hassan) ಜಿಲ್ಲೆಗಳಿಗೂ ಇದರ ಬಿಸಿ ತಟ್ಟಲಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
ರಾಜ್ಯ ಗುಪ್ತಚರ ಇಲಾಖೆ ನೀಡಿರುವ ಮಾಹಿತಿಯಿಂದ ಎಚ್ಚೆತ್ತುಕೊಂಡಿರುವ ಮಂಗಳೂರು ಪೊಲೀಸರು, ಮುಂಜಾಗ್ರತಾ ಕ್ರಮವಾಗಿ ವಿವಿಧ ಜಿಲ್ಲೆಗಳಿಂದ 2 ಸಾವಿರಕ್ಕೂ ಅಧಿಕ ಪೊಲೀಸರನ್ನು ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜಿಸಿದ್ದಾರೆ. ಕೋಮು ಸೂಕ್ಷ್ಮ ಪ್ರದೇಶಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಪಥಸಂಚಲನ ನಡೆಸಿ, ಜಾಗ್ರತಿ ಮೂಡಿಸಿ, ಯಾವುದೇ ಪ್ರಚೋದನೆ ಮಾಡದಂತೆ ಎಲ್ಲ ಧಾರ್ಮಿಕ ಮುಖಂಡರಿಗೆ ಸೂಚನೆ ನೀಡಿದ್ದಾರೆ. ಜಾಲತಾಣಗಳಲ್ಲಿ ಕೋಮುದ್ವೇಷ ಹರಡುವವರ ಮೇಲೂ ಕಠಿಣ ಕ್ರಮ ಕೈಗೊಳ್ಳಲು ವಿಶೇಷ ತಂಡ ರಚಿಸಲಾಗಿದೆ. ಮಂಗಳೂರು ನಗರದಲ್ಲಿ ಆಗಸ್ಟ್ 1ರ ವರೆಗೂ 144 ಸೆಕ್ಷನ್ ಜಾರಿಗೊಳಿಸಲಾಗಿದ್ದು,

ಎಲ್ಲಾ ಮದ್ಯದ ಅಂಗಡಿಗಳು, ಹೋಟೆಲ್, ಮಾಲ್ಗಳು ಬಂದ್ ಮಾಡಲಾಗಿದೆ. ಕೇವಲ ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಮಂಗಳೂರು ಪೊಲೀಸರು ತಿಳಿಸಿದ್ದಾರೆ.